ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಫೈರಿಂಗ್ ಪ್ರಕರಣ: ಫಿಲೊಮಿನಾ ಸೇರಿ ಐವರ ಬಂಧನ, ಸುಂದರ್ ಪಾಲ್ ಪರಾರಿ

ಧಾರವಾಡ: ಧಾರವಾಡದ ತ್ರಿಬಲ್ ಐಟಿ ಬಳಿ ಮಂಗಳವಾರ ಹಾಡಹಗಲೇ ನಡೆದಿದ್ದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆವಲಪರ್ ಫಿಲೊಮಿನಾ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಇದರ ಜೊತೆಗೆ ಅವರ ಬಳಿ ಇದ್ದ ಒಂದು ರಿವಾಲ್ವಾರ್, ಒಂದು ಪಿಸ್ತೂಲು ಸೇರಿದಂತೆ ಒಂದು ಕಾರನ್ನೂ ವಶಕ್ಕೆ ಪಡೆಯಲಾಗಿದೆ.

ತ್ರಿಬಲ್ ಐಟಿ ಬಳಿ ತಡಸಿನಕೊಪ್ಪಕ್ಕೆ ಹೊಂದಿಕೊಂಡು ಒಂದು ಜಮೀನು ಇದ್ದು, ಆ ಜಮೀನನ್ನು ತಾವು ಖರೀದಿ ಮಾಡಿದ್ದೇವೆ ಎಂದು ಡೆವಲಪರ್ ಫಿಲೊಮಿನಾ ಸೇರಿದಂತೆ ಆತನ ಪುತ್ರ ಸುಂದರ್ ಪಾಲ್ ಹಾಗೂ ಅವರ ಖಾಸಗಿ ಗನ್‌ಮ್ಯಾನ್‌ಗಳು ಆ ಸ್ಥಳಕ್ಕೆ ಹೋಗಿ ಹಿಟಾಚಿಯಿಂದ ಭೂಮಿ ಡೆವಲಪ್‌ಮೆಂಟ್ ಮಾಡಲು ಆರಂಭಿಸಿದ್ದರು. ಆ ಸ್ಥಳಕ್ಕೆ ಹೋದ ತಡಸಿನಕೊಪ್ಪ ಗ್ರಾಮದ ವಿಠ್ಠಲ ವಾಲೀಕಾರ ಹಾಗೂ ಅವರ ಸಹಚರರು, ಇಲ್ಲಿ ನಮಗೆ ಸೇರಿದ 2 ಎಕರೆ ಜಮೀನು ಇದೆ. ನಮ್ಮ ಜಮೀನು ಬಿಟ್ಟು ನೀವು ಭೂಮಿ ಡೆವಲಪ್‌ಮೆಂಟ್ ಮಾಡಿಕೊಳ್ಳಿ ಎಂದು ತಕರಾರು ತೆಗೆದಿದ್ದರು. ಇದರಿಂದ ಮಾತಿಗೆ ಮಾತು ಬೆಳೆದು ಎರಡೂ ಗುಂಪುಗಳು ಕೈಕೈ ಕೂಡ ಮಿಲಾಯಿಸಿದ್ದವು. ಈ ವೇಳೆ ಸುಂದರ್ ಪಾಲ್ ಹಾಗೂ ಪ್ರವೀಣ್ ಸುತಾರ್ ಎಂಬಾತರು ಗಾಳಿಯಲ್ಲಿ ಮೂರ್ನಾಲ್ಕು ಸುತ್ತು ಗುಂಡು ಹಾರಿಸಿದ್ದರು. ಒಂದು ಗುಂಡು ವಿಠ್ಠಲನ ಕಾಲಿಗೆ ತಾಕಿ ಆತ ಗಾಯಗೊಂಡಿದ್ದ.

ಈ ಸಂಬಂಧ ಪ್ರತಿಕ್ರಿಯಿಸಿದ್ದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, ಖಾಸಗಿ ಗನ್‌ಮ್ಯಾನ್‌ಗಳು ಗುಂಡು ಹಾರಿಸಿದ್ದರು ಎಂಬ ಮಾಹಿತಿ ನೀಡಿದ್ದರು. ಆದರೆ, ಕೆಲವೊಂದಿಷ್ಟು ವೀಡಿಯೋಗಳಲ್ಲಿ ಸ್ವತಃ ಸುಂದರ್ ಪಾಲ್‌ ಹಾಗೂ ಪ್ರವೀಣ್ ಸುತಾರ್ ಗುಂಡು ಹಾರಿಸಿದ್ದು ಸ್ಪಷ್ಟವಾಗಿ ಗೊತ್ತಾಗಿದೆ. ಈ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಕೆಲವರು ಲ್ಯಾಂಡ್ ಖರೀದಿ ಮಾಡಿದ್ದೇವೆ ಎಂದು ಅಲ್ಲಿ ಲ್ಯಾಂಡ್ ಡೆವಲಪ್ ಮಾಡಲು ಬಂದಿದ್ದರು. ಅವರು ಫಾಯರ್ ಆರ್ಮ್ ಉಪಯೋಗಿಸಿ ಫಾಯರ್ ಮಾಡಿದ್ದಾರೆ. ಈ ಸಂಬಂಧ ದೂರು ಕೂಡ ದಾಖಲಿಸಿಕೊಳ್ಳಲಾಗಿತ್ತು. ಆರೋಪಿಗಳ ಮೇಲೆ ಅಟ್ರಾಸಿಟಿ ದೂರು ಕೂಡ ದಾಖಲಿಸಲಾಗಿದೆ. ಮೊದಲು ಗನ್‌ಮ್ಯಾನ್‌ಗಳು ಫೈರ್ ಮಾಡಿದ್ದಾರೆ ಎಂಬ ಮಾಹಿತಿ ಇತ್ತು. ಕೆಲ ವೀಡಿಯೋ ನೋಡಿದ ನಂತರ ಬೇರೆಯವರು ಫೈರ್ ಮಾಡಿದ್ದು ಗೊತ್ತಾಗಿದೆ. ಈ ಸಂಬಂಧ ಫಿಲೊಮಿನಾ, ಪ್ರವೀಣ್ ಸುತಾರ್, ಇಂದರ್‌ಪಾಲ್, ಬೆಂಜಮಿನ್ ಹಾಗೂ ವಿಶಾಲ್ ಎಂಬುವವರನ್ನು ಬಂಧಿಸಲಾಗಿದೆ. ಸುಂದರ್ ಪಾಲ್ ಪರಾರಿಯಾಗಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಈ ಪ್ರಕರಣದಲ್ಲಿ ಪ್ರವೀಣ್ ಎನ್ನುವವರು ಆ ಜಮೀನು ಖರೀದಿ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ದಾಖಲೆಗಳು ಬೇರೆ ಇವೆ. ಈ ಆರೋಪಿಗಳ ಮೇಲೆ ಬೇರೆ ಬೇರೆ ಠಾಣೆಗಳಲ್ಲೂ ಪ್ರಕರಣ ಇವೆ. ಸುಂದರ್ ಪಾಲ್ ಮೇಲೆ ಈ ಹಿಂದೆ ಕೂಡ ದೂರು ದಾಖಲಾಗಿವೆ. ಆತನ ಗನ್ ಲೈಸೆನ್ಸ್ ರದ್ದಾಗಿದೆಯಾ ಎಂಬುದರ ಬಗ್ಗೆಯೂ ಪರಿಶೀಲನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಪಿಸ್ತೂಲ್, ಒಂದು ರಿವಾಲ್ವಾರ್ ಹಾಗೂ ಒಂದು ಫಾರ್ಚುನರ್ ಕಾರ್‌ ಕೂಡ ವಶಕ್ಕೆ ಪಡೆಯಲಾಗಿದೆ.

ಒಟ್ಟಾರೆ ಮಂಗಳವಾರ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ವಶಕ್ಕೆ ಪಡೆದಿರುವ ಪೊಲೀಸರು ಇದರಲ್ಲಿರುವ ಇನ್ನಷ್ಟು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/05/2026 01:28 pm

Cinque Terre

50.07 K

Cinque Terre

2