ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

BYJU’S ಸಂಸ್ಥಾಪಕ ರವೀಂದ್ರನ್‌ಗೆ ಸಿಂಗಾಪುರದಲ್ಲಿ ಜೈಲು ಶಿಕ್ಷೆ

ಸಿಂಗಾಪುರ ನ್ಯಾಯಾಲಯವು ಎಡ್‌ಟೆಕ್ ಸಂಸ್ಥೆ BYJU’S ಸಂಸ್ಥಾಪಕ ಬೈಜು ರವೀಂದ್ರನ್ ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಕತಾರ್ ಇನ್ವೆಸ್ಟ್‌ಮೆಂಟ್ ಅಥಾರಿಟಿಯ ಅಂಗಸಂಸ್ಥೆಯಾದ Qatar Holding ಸಲ್ಲಿಸಿದ್ದ ಒಪ್ಪಂದ ಉಲ್ಲಂಘನೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮಹತ್ವದ ತೀರ್ಪು ಹೊರಬಿದ್ದಿದೆ. ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ಏಪ್ರಿಲ್ 2024ರಿಂದ ನ್ಯಾಯಾಲಯ ನೀಡಿದ್ದ ಹಲವು ಆದೇಶಗಳನ್ನು ಬೈಜು ರವೀಂದ್ರನ್ ಪಾಲಿಸದ ಹಿನ್ನೆಲೆಯಲ್ಲಿ ಈ ಶಿಕ್ಷೆಯನ್ನು ವಿಧಿಸಲಾಗಿದೆ.

ನ್ಯಾಯಾಲಯವು ಬೈಜು ರವೀಂದ್ರನ್ ಅವರಿಗೆ ಯಾವುದೇ ವಿಳಂಬವಿಲ್ಲದೆ ಸಿಂಗಾಪುರದ ಸಂಬಂಧಿತ ಅಧಿಕಾರಿಗಳ ಮುಂದೆ ಶರಣಾಗುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇದರ ಜೊತೆಗೆ, ಕಾನೂನು ವೆಚ್ಚಗಳಿಗಾಗಿ ಸುಮಾರು 90 ಸಾವಿರ ಸಿಂಗಾಪುರ ಡಾಲರ್‌ಗಳನ್ನು (ಭಾರತೀಯ ಕರೆನ್ಸಿಯಲ್ಲಿ ಅಂದಾಜು 67 ಲಕ್ಷ ರೂಪಾಯಿ) ಪಾವತಿಸುವಂತೆ ಆದೇಶಿಸಿದೆ.

ಈ ಪ್ರಕರಣದಲ್ಲಿ ಹೂಡಿಕೆದಾರರ ಹಣವನ್ನು ದುರುಪಯೋಗಪಡಿಸಿಕೊಂಡು, ವೈಯಕ್ತಿಕ ಹಾಗೂ ಕಂಪನಿಯ ಆಸ್ತಿ ವಿವರಗಳನ್ನು ಅಂತರರಾಷ್ಟ್ರೀಯ ನ್ಯಾಯಾಲಯಗಳಿಂದ ಮುಚ್ಚಿಡಲು ಪ್ರಯತ್ನಿಸಲಾಗಿದೆ ಎಂಬ ಗಂಭೀರ ಆರೋಪಗಳೂ ಸೇರಿವೆ. ನ್ಯಾಯಾಲಯದ ಸರಣಿ ಆದೇಶಗಳನ್ನು ನಿರಂತರವಾಗಿ ನಿರ್ಲಕ್ಷ್ಯ ಮಾಡಿರುವುದರ ಬಗ್ಗೆ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕಾನೂನು ಪ್ರಕ್ರಿಯೆಗಳಿಂದ ತಪ್ಪಿಸಿಕೊಳ್ಳಲು ಮತ್ತು ಮಾಹಿತಿಗಳನ್ನು ಮುಚ್ಚಿಡಲು ಉದ್ದೇಶಪೂರ್ವಕ ಪ್ರಯತ್ನ ನಡೆದಿದೆ ಎಂದು ನ್ಯಾಯಾಲಯ ಕಟುವಾಗಿ ಟೀಕಿಸಿದೆ. ವಿದೇಶಿ ಹೂಡಿಕೆದಾರರು ಮತ್ತು ಸಾಲದಾತರು ತಮ್ಮ ನಷ್ಟವನ್ನು ವಸೂಲಿ ಮಾಡಿಕೊಳ್ಳಲು ಜಾಗತಿಕ ಮಟ್ಟದಲ್ಲಿ ಬೈಜು ರವೀಂದ್ರನ್ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಈ ಹಿಂದೆ ಅಮೆರಿಕದ ನ್ಯಾಯಾಲಯವೂ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಬೈಜು ರವೀಂದ್ರನ್ ಅವರಿಗೆ ಭಾರಿ ಮೊತ್ತದ ದಂಡ ವಿಧಿಸಿತ್ತು.

ಇದೇ ವೇಳೆ, ಭಾರತದಲ್ಲಿ ಜಾರಿ ನಿರ್ದೇಶನಾಲಯ (ED) ಕೂಡ BYJU’S ಸಂಸ್ಥೆಯ ವಿರುದ್ಧ ತನ್ನ ತನಿಖೆಯನ್ನು ಮುಂದುವರಿಸಿದೆ. ವಿದೇಶಿ ಹೂಡಿಕೆ ಸ್ವೀಕಾರ ಮತ್ತು ವಿದೇಶಗಳಿಗೆ ಹಣ ವರ್ಗಾವಣೆ ಪ್ರಕ್ರಿಯೆಯಲ್ಲಿ ಸುಮಾರು 9 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಫೆಮಾ (FEMA) ನಿಯಮ ಉಲ್ಲಂಘನೆ ನಡೆದಿದೆ ಎಂಬ ಆರೋಪದಡಿ ತನಿಖೆ ನಡೆಯುತ್ತಿದೆ. ಹೂಡಿಕೆದಾರರನ್ನು ಸೆಳೆಯುವ ಉದ್ದೇಶದಿಂದ ಕಂಪನಿಯ ಆದಾಯದ ಬಗ್ಗೆ ಸುಳ್ಳು ಲೆಕ್ಕಪತ್ರ ಸೃಷ್ಟಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

Edited By : Nagaraj Tulugeri
PublicNext

PublicNext

27/05/2026 02:05 pm

Cinque Terre

8.56 K

Cinque Terre

0

ಸಂಬಂಧಿತ ಸುದ್ದಿ