ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

SIRನಿಂದ ಹೆಸರು ತೆಗೆದರೂ ಪೌರತ್ವ ಇರಲಿದೆ - ಸುಪ್ರೀಮ್ ಕೋರ್ಟ್

ನವದೆಹಲಿ: ಮತದಾರರ ಪಟ್ಟಿಯಿಂದ ಹೆಸರು ಅಳಿಸಲ್ಪಟ್ಟರೂ ಅದರಿಂದ ವ್ಯಕ್ತಿಯ ಭಾರತೀಯ ಪೌರತ್ವ ಕೊನೆಗೊಳ್ಳುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಬುಧವಾರ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಕುರಿತು ಅರ್ಜಿದಾರರು ಹಾಗೂ ವಿರೋಧ ಪಕ್ಷಗಳು, ಇದು 'ಹಿಂಬಾಗಿಲಿನ ಪೌರತ್ವ ಪರಿಶೀಲನೆ' ಎಂದು ವಾದಿಸಿದ್ದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಈ ಅಭಿಪ್ರಾಯ ಮಹತ್ವ ಪಡೆದಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು SIR ಪ್ರಕ್ರಿಯೆಯ ಕಾನೂನುಬದ್ಧತೆಯನ್ನು ಎತ್ತಿಹಿಡಿಯುವ ವೇಳೆ ಈ ಸ್ಪಷ್ಟೀಕರಣ ನೀಡಿದೆ.

ಭಾರತ ಚುನಾವಣಾ ಆಯೋಗಕ್ಕೆ (ECI) ಪೌರತ್ವ ನಿರ್ಧರಿಸುವ ಅಧಿಕಾರವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆಯೋಗವು ವ್ಯಕ್ತಿಯ ಪೌರತ್ವ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಬಹುದಾದರೂ, ಅದು ಮತದಾರರ ಪಟ್ಟಿಯಲ್ಲಿ ವ್ಯಕ್ತಿಯನ್ನು ಸೇರಿಸಬೇಕೇ ಅಥವಾ ಹೊರಗಿಡಬೇಕೇ ಎಂಬ ನಿರ್ಧಾರಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿತು. "ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಹೆಸರು ಅಳಿಸಬಹುದು, ಆದರೆ ಅದರಿಂದ ಆ ವ್ಯಕ್ತಿ ಭಾರತದ ಪ್ರಜೆಯಲ್ಲ ಎಂಬ ಅರ್ಥ ಬರುವುದಿಲ್ಲ. ಪೌರತ್ವ ನಿರ್ಧಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ," ಎಂದು ಸುಪ್ರೀಂ ಕೋರ್ಟ್‌ ಖಡಾಖಂಡಿತವಾಗಿ ಹೇಳಿದೆ. ಎಸ್‌ಐಆರ್‌ ಪ್ರಕ್ರಿಯೆಯ ಮೂಲಕ ಚುನಾವಣಾ ಆಯೋಗವು ಪರೋಕ್ಷವಾಗಿ ಪೌರತ್ವ ಪರಿಶೀಲನೆ ನಡೆಸುತ್ತಿದೆ ಎಂದು ಅರ್ಜಿದಾರರು ಮತ್ತು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ ಮತದಾರರ ಪಟ್ಟಿಯ ನಿರ್ವಹಣೆ ಮತ್ತು ಪೌರತ್ವ ನಿರ್ಧಾರಗಳು ಎರಡು ಪ್ರತ್ಯೇಕ ವಿಚಾರಗಳಾಗಿವೆ ಎಂದು ನ್ಯಾಯಾಲಯ ಮತ್ತೊಮ್ಮೆ ಸ್ಪಷ್ಟಪಡಿಸಿತು.

Edited By : Nagaraj Tulugeri
PublicNext

PublicNext

27/05/2026 03:18 pm

Cinque Terre

20.85 K

Cinque Terre

2

ಸಂಬಂಧಿತ ಸುದ್ದಿ