ಬೆಂಗಳೂರು : ನಟ ರಣವೀರ್ ಸಿಂಗ್ ಅವರನ್ನು ಚಿತ್ರರಂಗದಿಂದ ನಿಷೇಧ (ಬ್ಯಾನ್) ಮಾಡಲಾಗಿದೆ ಎಂಬ ವದಂತಿಗಳಿಗೆ ಪಶ್ಚಿಮ ಭಾರತ ಚಲನಚಿತ್ರ ನೌಕರರ ಒಕ್ಕೂಟ (FWICE) ಸ್ಪಷ್ಟನೆ ನೀಡಿದೆ. ಇದು ಬ್ಯಾನ್ ಅಲ್ಲ, ಕೇವಲ 'ನಾನ್-ಕೋಆಪರೇಷನ್' ಮಾತ್ರ ಎಂದು ಒಕ್ಕೂಟದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ತಿಳಿಸಿದ್ದಾರೆ.
ರಣವೀರ್ ಸಿಂಗ್ ಅವರು 'ಡಾನ್ 3' ಸಿನಿಮಾದಿಂದ ಹೊರಬಂದಿದ್ದರಿಂದ ಈ ವಿವಾದ ಆರಂಭವಾಗಿದೆ. ನಿರ್ಮಾಪಕರಾದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಅವರು ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಿಗಾಗಿ ಈಗಾಗಲೇ ಸುಮಾರು 45 ಕೋಟಿ ರೂ. ವೆಚ್ಚ ಮಾಡಿದ್ದರು. ನಟನ ದಿಢೀರ್ ನಿರ್ಧಾರದಿಂದ ನಿರ್ಮಾಪಕರಿಗೆ ದೊಡ್ಡ ನಷ್ಟವಾಗಿದೆ. ಜೊತೆಗೆ ಈ ಕುರಿತು ಮಾತನಾಡಲು ರಣವೀರ್ ಒಕ್ಕೂಟದ ಮುಂದೆ ಹಾಜರಾಗಿಲ್ಲ ಎಂಬ ಆರೋಪವೂ ಇದೆ.
ಸಮಸ್ಯೆ ಬಗೆಹರಿಯುವವರೆಗೆ ಒಕ್ಕೂಟದ 30 ವಿಭಾಗಗಳ ಯಾವೊಬ್ಬ ಸದಸ್ಯರೂ (ಲೈಟ್‌ಮ್ಯಾನ್, ಮೇಕಪ್ ಆರ್ಟಿಸ್ಟ್, ಎಡಿಟರ್ಸ್ ಇತ್ಯಾದಿ) ರಣವೀರ್ ಜೊತೆ ಕೆಲಸ ಮಾಡಬಾರದು ಎಂದು ಸೂಚಿಸಲಾಗಿದೆ. ಎಲ್ಲರೂ ಕುಳಿತು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅಶೋಕ್ ಪಂಡಿತ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಣವೀರ್ ಸಿಂಗ್ ಆಪ್ತರು, "ರಣವೀರ್ ಅವರಿಗೆ ಚಿತ್ರರಂಗದ ಮೇಲೆ ಗೌರವವಿದೆ. ವಿಷಯವನ್ನು ದೊಡ್ಡದು ಮಾಡದೆ, ಗೌರವಯುತವಾಗಿ ಬಗೆಹರಿಸಲು ಅವರು ಸದ್ಯ ಮೌನವಾಗಿದ್ದಾರೆ" ಎಂದು ತಿಳಿಸಿದ್ದಾರೆ. ಸದ್ಯಕ್ಕೆ ಇದು ಸಂಪೂರ್ಣ ನಿಷೇಧವಲ್ಲದಿದ್ದರೂ, ಮಾತುಕತೆ ನಡೆಯುವವರೆಗೂ ರಣವೀರ್ ಚಿತ್ರೀಕರಣಕ್ಕೆ ತಾಂತ್ರಿಕ ಸಿಬ್ಬಂದಿಯ ಸಹಕಾರ ಸಿಗುವುದು ಕಷ್ಟವಾಗಿದೆ.
PublicNext
27/05/2026 06:02 pm