ಬ್ರಹ್ಮಾವರ: ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 'ಶಕ್ತಿ' ಯೋಜನೆಯು ಖಾಸಗಿ ಬಸ್‌ಗಳ ಮುಂದೆ ನಿಶ್ಯಕ್ತಗೊಂಡಿದ್ದು, ಅದರ ಸಮರ್ಪಕ ಅನುಷ್ಠಾನದ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬುಧವಾರ ಸಂಜೆ ಬ್ರಹ್ಮಾವರ ತಾಲೂಕು ಪಂಚಾಯತಿ ಕಚೇರಿಯ ಮಿನಿಹಾಲ್‌ನಲ್ಲಿ ಡಾ. ಸುನೀತಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ತಾಲೂಕು ಗ್ಯಾರೆಂಟಿ ಯೋಜನಾ ಅನುಷ್ಠಾನ ಸಮಿತಿಯ ಸಭೆಯಲ್ಲಿ ಈ ವಿಷಯ ಪ್ರಮುಖವಾಗಿ ಚರ್ಚೆಗೆ ಬಂತು.
ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳು ಬಹುತೇಕ ಯಶಸ್ವಿಯಾಗಿವೆ. ಆದರೆ, ಸಾರಿಗೆ ವ್ಯವಸ್ಥೆಗೆ ಸಂಬಂಧಿಸಿದಂತೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಸಭೆಯ ಬಹುತೇಕ ಸದಸ್ಯರು, "ಕರಾವಳಿ ಜಿಲ್ಲೆ ಉಡುಪಿಯಲ್ಲಿ ಸಾರಿಗೆ ಇಲಾಖೆಯೇ ಖಾಸಗಿ ಬಸ್ ಮಾಲೀಕರೊಂದಿಗೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿದೆ" ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಾರಿಗೆ ಅಧಿಕಾರಿಯವರನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮೀಣ ಪ್ರದೇಶಗಳಲ್ಲಿ 'ಶಕ್ತಿ' ಯೋಜನೆಯು ಖಾಸಗಿ ಬಸ್‌ಗಳ ಏಕಸ್ವಾಮ್ಯದ ಮುಂದೆ ನಿಷ್ಪ್ರಯೋಜಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಇತ್ತೀಚೆಗೆ ಉಡುಪಿಯಿಂದ ಬ್ರಹ್ಮಾವರ, ಮಟಪಾಡಿ, ನೀಲಾವರ, ಕೂರಾಡಿ ಗುಡ್ಡೆಅಂಗಡಿ ಮೂಲಕ ಮಂದಾರ್ತಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಹೊಸ ಬಸ್ ಮಾರ್ಗ ಆರಂಭಗೊಂಡಿದೆ.
ಆದರೆ, ಈ ಕುರಿತು ಗ್ಯಾರೆಂಟಿ ಸಮಿತಿಗೆ ಮಾಹಿತಿ ಇಲ್ಲದೆ, ಖಾಸಗಿ ಬಸ್ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿದಿರುವುದು ಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು. ಇದೇ ವೇಳೆ, ಉಳಿದ ನಾಲ್ಕು ಯೋಜನೆಗಳ ಪ್ರಗತಿ ವರದಿಯನ್ನು ಇಲಾಖಾ ಮುಖ್ಯಸ್ಥರು ಸಭೆಗೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ, ಈ ತಿಂಗಳಲ್ಲಿ ನಿವೃತ್ತರಾಗಲಿರುವ ಗ್ಯಾರೆಂಟಿ ಯೋಜನೆಯ ಸಮನ್ವಯಾಧಿಕಾರಿ ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂ ಪುರ್ ಅವರನ್ನು ಸನ್ಮಾನಿಸಲಾಯಿತು. ಕಚೇರಿಯ ಮೆಲ್ವಿನ್ ತೋಮಸ್ ಬಾಂಜ್ ಉಪಸ್ಥಿತರಿದ್ದರು.
Kshetra Samachara
28/05/2026 07:07 am