ಚಿಕ್ಕಮಗಳೂರು: ಜನ ಸತ್ತ ಮೇಲೂ ಸಮಾಜದಲ್ಲಿ ಜಾತಿ, ಧರ್ಮ, ಅಂತಸ್ತುಗಳ ಭೇದ ಹುಡುಕುವ ಈ ಕಾಲದಲ್ಲಿ, ಅನಾಥವಾಗಿ ಬಿದ್ದ ಹೆಣಗಳಿಗೆ ಹೆಗಲು ಕೊಟ್ಟು ಮುಕ್ತಿ ಕಾಣಿಸುತ್ತಿರುವ ಕಾಫಿನಾಡಿನ ಯುವಕನೊಬ್ಬ ಇಡೀ ನಾಗರಿಕ ಸಮಾಜಕ್ಕೆ ಮಾದರಿಯಾಗಿದ್ದಾನೆ. ರಸ್ತೆಯಲ್ಲಿ ಅಪಘಾತವಾದರೆ ರಕ್ಷಿಸುವ ಬದಲು ಮೊಬೈಲ್ ಹಿಡಿದು ವಿಡಿಯೋ ಮಾಡುವ ಇಂದಿನ ಸ್ವಾರ್ಥ ಜಗತ್ತಿನಲ್ಲಿ, "ಯಾರೋ ಸತ್ತರೆ ನಮಗೇನು?" ಅಂದುಕೊಳ್ಳದ ಈ ಯುವಕ ಒಂದು ಸಾವಿರಕ್ಕೂ ಹೆಚ್ಚು ಅನಾಥ ಶವಗಳಿಗೆ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾನೆ.
ಇಂತಹ ಒಂದು ಹೃದಯಸ್ಪರ್ಶಿ ಮತ್ತು ನಿಸ್ವಾರ್ಥ ಸೇವೆಯ ಮೂಲಕವೇ ಗಮನ ಸೆಳೆಯುತ್ತಿರುವುದು ಚಿಕ್ಕಮಗಳೂರಿನ ಪುನೀತ್.
8 ವರ್ಷಗಳ ಹಿಂದೆ ಆಂಬುಲೆನ್ಸ್ ಚಾಲಕನಾಗಿ ವೃತ್ತಿ ಜೀವನ ಆರಂಭಿಸಿದಾಗ ಆಸ್ಪತ್ರೆಯ ಶವಗಾರದಲ್ಲಿ ಎದುರಾದ ಕೆಲವು ಘಟನೆಗಳು ಈ ನಿರ್ಧಾರ ಕೈಗೊಳ್ಳಲು ಪ್ರೇರಣೆಯಾದವು. ಅಪಘಾತದಲ್ಲಿ ಮರಣ ಹೊಂದಿದ ಅಥವಾ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಗಳ ಗುರುತು ಪತ್ತೆಗಾಗಿ ಪೊಲೀಸರು ಕರೆಯುವಾಗ ಹೆದರಿ ಹಿಂದೆ ಸರಿಯುತ್ತಿದ್ದ ಜನರನ್ನು ಕಂಡು ಪುನೀತ್ ತಾವೇ ಸ್ವತಃ ಮುಂದೆ ನಿಂತು ಸಹಾಯ ಮಾಡಲು ಆರಂಭಿಸಿದರು. ಅಂದು ಆರಂಭವಾದ ಇವರ ಈ ಸೇವೆ ಕೊರೊನಾ ಸಾಂಕ್ರಾಮಿಕದ ಕಠಿಣ ದಿನಗಳಲ್ಲೂ ಮುಂದುವರಿದು, ಈ ವರೆಗೆ ಸಾವಿರಕ್ಕೂ ಅಧಿಕ ಅನಾಥ ಶವಗಳ ಗೌರವಯುತ ಸಂಸ್ಕಾರಕ್ಕೆ ಕಾರಣವಾಗಿದೆ. ಪುನೀತ್ ಇಂದಿನ ಪೀಳಿಗೆಗೆ ಒಂದು ಮಹತ್ವದ ಸಂದೇಶವನ್ನು ನೀಡಿದ್ದು ನಮ್ಮನ್ನು ಸಾಕಿ ಸಲಹಿದ ತಂದೆ-ತಾಯಂದಿರನ್ನು ವೃದ್ಧಾಪ್ಯದಲ್ಲಿ ಬೀದಿಗೆ ತಳ್ಳಬಾರದು ಮತ್ತು ಅವರನ್ನು ಗೌರವದಿಂದ ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕು ಎಂದು ಅವರು ವಿನಂತಿಸಿ ಹೆತ್ತವರನ್ನು ಅಲಕ್ಷಿಸುವುದರಿಂದಲೇ ಇಂತಹ ಅನಾಥ ಶವಗಳ ಸಂಖ್ಯೆ ಹೆಚ್ಚುತ್ತಿದ್ದು, ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ವಿಷಯವಾಗಿದೆ ಎನ್ನುವುದು ಅವರ ಕಳಕಳಿಯಾಗಿದೆ. ಸೇವೆ ಮಾಡಲು ಯಾವುದೇ ಗಡಿಗಳಿಲ್ಲ ಎಂಬುದನ್ನು ಪುನೀತ್ ಅವರು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದ್ದಾರೆ.
PublicNext
29/05/2026 10:34 pm