ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ಶನಿವಾರ ಪಶ್ಚಿಮ ಬಂಗಾಳದ ಸೋನಾರ್ಪುರ ಪ್ರದೇಶಕ್ಕೆ ಭೇಟಿ ನೀಡಿದ್ದಾಗ ಪ್ರತಿಭಟನಾಕಾರರ ಗುಂಪಿನಿಂದ ಹಲ್ಲೆಗೆ ಒಳಗಾಗಿದ್ದಾರೆ. ಈ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಟಿಎಂಸಿ ಗಂಭೀರ ಆರೋಪ ಮಾಡಿದೆ.
ಚುನಾವಣೋತ್ತರ ಹಿಂಸಾಚಾರದಲ್ಲಿ ಸಂತ್ರಸ್ತರಾದ ಕುಟುಂಬಗಳನ್ನು ಭೇಟಿ ಮಾಡಲು ತೆರಳುತ್ತಿದ್ದ ವೇಳೆ ಬ್ಯಾನರ್ಜಿ ಅವರ ವಾಹನದ ಮೇಲೆ ಮೊಟ್ಟೆ ಮತ್ತು ಕಲ್ಲುಗಳನ್ನು ತೂರಲಾಗಿದೆ. ಈ ಸಂದರ್ಭದಲ್ಲಿ, "ಚೋರ್ ಚೋರ್" (ಕಳ್ಳ ಕಳ್ಳ) ಎಂಬ ಘೋಷಣೆಗಳನ್ನು ಕೂಗಿ ಉದ್ವಿಗ್ನ ವಾತಾವರಣ ಸೃಷ್ಟಿಸಲಾಯಿತು.
ಘಟನೆಯ ವೇಳೆ ಪರಿಸ್ಥಿತಿ ತೀವ್ರ ಉದ್ವಿಗ್ನಗೊಂಡಾಗ, ಬ್ಯಾನರ್ಜಿ ಅವರ ಭದ್ರತಾ ಸಿಬ್ಬಂದಿ ತಕ್ಷಣ ಅವರನ್ನು ಸುತ್ತುವರಿದು, ತಲೆಗೆ ಹೆಲ್ಮೆಟ್ ಧರಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ದಾಳಿಯು ಸಂಪೂರ್ಣವಾಗಿ ಬಿಜೆಪಿ ಪ್ರಾಯೋಜಿತ ಎಂದು ಟಿಎಂಸಿ ಆರೋಪಿಸಿದೆ.
ದಾಳಿಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, "ಇದು ಸಂಪೂರ್ಣವಾಗಿ ಬಿಜೆಪಿ ಪ್ರಾಯೋಜಿತ ದಾಳಿ. ಇದೇ ಇವರ ಪ್ರಜಾಪ್ರಭುತ್ವದ ಮಾದರಿ. ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳೂ ಆಗಿಲ್ಲ, ಆದರೆ ಸ್ಥಳದಲ್ಲಿ ಪೊಲೀಸರೇ ಕಾಣಿಸುತ್ತಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದರು.
"ನನ್ನನ್ನು ಕೊಲ್ಲುವ ಉದ್ದೇಶದಿಂದಲೇ ಈ ದಾಳಿ ನಡೆಸಲಾಗಿದೆ. ಸಂಪೂರ್ಣ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನನ್ನ ಹೆಣ ಬಿದ್ದರೂ ಪರವಾಗಿಲ್ಲ, ನಾನು ಮಾತ್ರ ಈ ಪ್ರದೇಶವನ್ನು ಬಿಟ್ಟು ಹೋಗುವುದಿಲ್ಲ," ಎಂದು ಬ್ಯಾನರ್ಜಿ ಆಕ್ರೋಶದಿಂದ ಘೋಷಿಸಿದರು. ಅಲ್ಲದೆ, "ಈ ಬಗ್ಗೆ ಹೈಕೋರ್ಟ್ ಮತ್ತು ರಾಜ್ಯಪಾಲರಿಗೆ ದೂರು ನೀಡುತ್ತೇವೆ. ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇನೆ," ಎಂದು ಎಚ್ಚರಿಕೆ ನೀಡಿದರು.
ಅದೃಷ್ಟವಶಾತ್, ಹೆಲ್ಮೆಟ್ ಧರಿಸಿದ್ದರಿಂದ ನನ್ನ ತಲೆಗೆ ಯಾವುದೇ ಪೆಟ್ಟಾಗಿಲ್ಲ. ಆದರೆ, ನನ್ನ ಬಟ್ಟೆಗಳನ್ನು ಹರಿದು ಹಾಕಿ, ಕನ್ನಡಕವನ್ನು ಒಡೆದು ಹಾಕಿದ್ದಾರೆ ಎಂದು ಬ್ಯಾನರ್ಜಿ ತಿಳಿಸಿದರು. ಸ್ಥಳದಲ್ಲಿ ಪೊಲೀಸ್ ಭದ್ರತೆ ಇಲ್ಲದಿರುವುದನ್ನು ತೀವ್ರವಾಗಿ ಖಂಡಿಸಿದ ಅವರು, ನಮ್ಮನ್ನು ಕೊಲ್ಲಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.
PublicNext
30/05/2026 07:50 pm