ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ: ಹುಬ್ಬಳ್ಳಿ ಗ್ರಾಮೀಣ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಹುಬ್ಬಳ್ಳಿ: ಕಳೆದ 19 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಹೌದು, 2007ರಲ್ಲಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಹೆಬಸೂರ ಗ್ರಾಮದ ಚನ್ನಪ್ಪ ರೇವಣಪ್ಪ ಸಂಗೊಳ್ಳಿ ಎಂಬಾತ, ತನ್ನ ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ದೂರಿನ ಮೇರೆಗೆ, 18-11-2007ರಂದು ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿಯಾಗಿದ್ದ ಚನ್ನಪ್ಪ ಸಂಗೊಳ್ಳಿ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ನಿಗದಿತ ದಿನಾಂಕಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದರಿಂದ ನ್ಯಾಯಾಲಯವು ಪ್ರಕರಣವನ್ನು ದೀರ್ಘಕಾಲ ಬಾಕಿ ಉಳಿದ (ಲಾಂಗ್ ಪೆಂಡಿಂಗ್) ಪ್ರಕರಣವೆಂದು ಪರಿಗಣಿಸಿ ಆರೋಪಿಯ ವಿರುದ್ಧ ಓಪನ್ ವಾರಂಟ್ ಜಾರಿಗೊಳಿಸಿತ್ತು.

ಆರೋಪಿಯ ಪತ್ತೆಗಾಗಿ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಧಾರವಾಡ ಗ್ರಾಮೀಣ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಆರ್. ಚನ್ನಣ್ಣವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಎಎಸ್‌ಐ ಎಲ್.ಎ. ಪಾಠಕ ಹಾಗೂ ಸಿಎಚ್‌ಸಿ ಎಸ್.ಎ. ಹುಡೇದ ಸೇರಿದಂತೆ ತಂಡದ ಸದಸ್ಯರು ಆರೋಪಿಯ ಸಂಬಂಧಿಕರ ಮೊಬೈಲ್ ಸಂಖ್ಯೆಗಳ ಆಧಾರದ ಮೇಲೆ ಧಾರವಾಡ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ವ್ಯಾಪಕ ಮಾಹಿತಿ ಸಂಗ್ರಹಿಸಿದರು.

ಜಿಲ್ಲಾ ಪೊಲೀಸ್ ಕಚೇರಿಯ ತಾಂತ್ರಿಕ ಸಿಬ್ಬಂದಿ ವಿಶ್ವಲ್ ಡಂಗನವರ ಅವರ ಸಹಕಾರದೊಂದಿಗೆ ಆರೋಪಿಯು ಗದಗ ಜಿಲ್ಲೆಯ ಕುರ್ತಕೋಟಿ ಗ್ರಾಮದಲ್ಲಿ ಇರುವುದನ್ನು ಪತ್ತೆಹಚ್ಚಲಾಯಿತು. ಅದರಂತೆ ಜೂನ್ 1ರಂದು ಕುರ್ತಕೋಟಿಗೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾದಾಗ ಆತ ಪೊಲೀಸರೊಂದಿಗೆ ವಾಗ್ವಾದ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಆದರೆ ಸ್ಥಳೀಯ ಸಾರ್ವಜನಿಕರ ಸಹಕಾರದಿಂದ ಆರೋಪಿಯನ್ನು ಯಶಸ್ವಿಯಾಗಿ ವಶಕ್ಕೆ ಪಡೆಯಲಾಯಿತು.

ಈ ಯಶಸ್ವಿ ಕಾರ್ಯಾಚರಣೆಗೆ ಕಾರಣರಾದ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಂ.ಆರ್. ಚನ್ನಣ್ಣವರ ಹಾಗೂ ಸಿಬ್ಬಂದಿಯ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದು, ತಂಡಕ್ಕೆ ಬಹುಮಾನ ಮಂಜೂರು ಮಾಡಲಾಗಿದೆ.

Edited By : Abhishek Kamoji
Kshetra Samachara

Kshetra Samachara

02/06/2026 07:33 pm

Cinque Terre

65.76 K

Cinque Terre

4

ಸಂಬಂಧಿತ ಸುದ್ದಿ