ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮತ್ತೆ ಅನೈತಿಕ ದಂಧೆಯ ಆರೋಪ ಸದ್ದು ಮಾಡಿದೆ. ಸ್ಪಾ ಮತ್ತು ಮಸಾಜ್ ಸೆಂಟರ್‌ಗಳ ಮೇಲೆ ದಾಳಿ ನಡೆಯುತ್ತಿರುವ ನಡುವೆಯೇ ಇದೀಗ ವಸತಿ ಪ್ರದೇಶದ ಮನೆಯೊಂದರಲ್ಲಿ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಆನಂದನಗರದಲ್ಲಿ, ಕುಷ್ಟರೋಗ ಆಸ್ಪತ್ರೆ ಮಾರ್ಗದ ಮನೆಯೊಂದರ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಕುಟುಂಬಗಳು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಓಡಾಡುವ ಪ್ರದೇಶದಲ್ಲೇ ಈ ರೀತಿಯ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಅನುಮಾನಾಸ್ಪದ ಓಡಾಟ ಮತ್ತು ಚಟುವಟಿಕೆಗಳ ದೃಶ್ಯಗಳನ್ನು ಕೆಲ ನಾಗರಿಕರು ಮೊಬೈಲ್‌ನಲ್ಲಿ ದಾಖಲಿಸಿಕೊಂಡಿರುವುದಾಗಿ ಹೇಳಲಾಗಿದ್ದು, ಪ್ರಶ್ನಿಸಲು ಹೋದವರ ಮೇಲೆಯೇ ಬೆದರಿಕೆ ಹಾಗೂ ಆರೋಪಗಳ ಸುರಿಮಳೆ ಮಾಡಲಾಗಿದೆ ಎನ್ನಲಾಗಿದೆ.
ವಿಷಯ ತಿಳಿದು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, "ಇಷ್ಟೆಲ್ಲಾ ಆರೋಪಗಳು ಕೇಳಿಬರುತ್ತಿದ್ದರೂ ಪೊಲೀಸರಿಗೆ ಮಾಹಿತಿ ಇರಲಿಲ್ಲವೇ? ಅಥವಾ ಮಾಹಿತಿ ಇದ್ದೂ ಕ್ರಮ ಕೈಗೊಳ್ಳಲಿಲ್ಲವೇ?" ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಆರೋಪಗಳು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು, ವಸತಿ ಪ್ರದೇಶಗಳನ್ನು ಅನೈತಿಕ ಚಟುವಟಿಕೆಗಳ ಅಡ್ಡೆಗಳಾಗದಂತೆ ತಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್
Kshetra Samachara
12/06/2026 05:14 pm
LOADING...