ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಲವ್ ಜಿಹಾದ್ ಪ್ರಕರಣ, ಭುಗಿಲೆದ್ದ ಹಿಂದೂ ಸಂಘಟನೆಗಳ ಆಕ್ರೋಶ

ಧಾರವಾಡ: ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಆಕ್ರೋಶ ಭುಗಿಲೆದ್ದಿದೆ.

ಗರಗ ಗ್ರಾಮದ ಪೂರ್ಣಿಮಾ ವಡ್ಡರ ಎಂಬ ಅಪ್ರಾಪ್ತ ಬಾಲಕಿಯನ್ನು ಲವ್ ಜಿಹಾದ್‌ಗೆ ಬಳಕೆ ಮಾಡಿಕೊಂಡು ಆಕೆಯೊಂದಿಗೆ ನಹೀಮ್ ಬೇಗ್ ಹಾಗೂ ಸೋಹಿಲ್ ಮುಲ್ಲಾ ಎಂಬ ಇಬ್ಬರು ಮುಸ್ಲಿಂ ಯುವಕರು ದೈಹಿಕ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಆಕೆಯೊಂದಿಗೆ ಇದ್ದ ಕೆಲ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರಿಂದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಶ್ವ ಹಿಂದೂ ಪರಿಷದ್, ಬಜರಂಗದಳ ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಆರೋಪಿಗಳನ್ನು ಬಂಧಿಸುವುದಷ್ಟೇ ಅಲ್ಲ ಅವರು ಗಲ್ಲುಶಿಕ್ಷೆಗೆ ಗುರಿಯಾಗುವಂತಹ ಸೆಕ್ಷನ್‌ಗಳನ್ನು ಪೊಲೀಸರು ಹಾಕಬೇಕು ಎಂದು ಗರಗ ಗ್ರಾಮದ ಗಾಂಧಿ ಸರ್ಕಲ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಸುಮಾರು ಹೊತ್ತು ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಈ ವೇಳೆ ಅನೇಕ ಹಿಂದೂ ಕಾರ್ಯಕರ್ತರು ಮತ್ತು ಮುಖಂಡರು ರಾಜ್ಯ ಕಾಂಗ್ರೆಸ್ ಸರ್ಕಾರ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪೊಲೀಸರ ವಿರುದ್ಧ ಹರಿಹಾಯ್ದರು. ಓರ್ವ ಹಿಂದೂ ಬಾಲಕಿಯನ್ನು ಲವ್ ಜಿಹಾದ್‌ಗೆ ಬಳಕೆ ಮಾಡಿ, ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ ಮುಸ್ಲಿಂ ಯುವಕರನ್ನು ಪೊಲೀಸರು ಹಲವು ದಿನಗಳ ಕಾಲ ಬಂಧಿಸಿರಲಿಲ್ಲ. ಈಗ ಅವರ ಬಂಧನವಾಗಿದ್ದು, ಅವರು ಗಲ್ಲು ಶಿಕ್ಷೆಗೆ ಗುರಿಯಾಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಇನ್ನು ಪ್ರತಿಭಟನಾ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಪ್ರತಿಭಟನಾಕಾರರಿಂದ ಮನವಿ ಪಡೆದರು. ಸದ್ಯ ಈ ಪ್ರಕರಣ ಡಿಸಿಆರ್‌ಇಗೆ ವರ್ಗಾವಣೆ ಆಗಿದೆ. ಈ ತನಿಖಾ ತಂಡದ ಅಧಿಕಾರಿಗಳು ಈ ಪ್ರಕರಣದ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಸಿ ಇದರಲ್ಲಿ ಇನ್ನೂ ಯಾರ್‍ಯಾರು ಇದ್ದಾರೆ ಎಂಬ ಮಾಹಿತಿಯನ್ನು ಬಾಲಕಿ ಪಾಲಕರು ನೀಡಿದರೆ ಅವರ ವಿರುದ್ಧವೂ ದೂರು ದಾಖಲಿಸಿಕೊಂಡು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತೇವೆ ಎಂದು ಎಸ್‌ಪಿ ಹೇಳಿದ್ದಾರೆ.

ಒಟ್ಟಾರೆ ಈ ಪ್ರಕರಣವನ್ನು ಪೊಲೀಸರೇ ರಾಜಿ ಸಂಧಾನ ಮಾಡಿಸಲು ಮುಂದಾಗಿದ್ದರು ಎಂಬ ಆರೋಪ ಕೂಡ ಕೇಳಿ ಬಂದಿದೆ. ಎಸ್‌ಪಿ ಅವರು ಆ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಈಗ ಈ ಲವ್ ಜಿಹಾದ್ ಪ್ರಕರಣ ಕಾವು ಪಡೆದುಕೊಂಡಿದ್ದು, ಆ ಬಾಲಕಿ ಕುಟಂಬಕ್ಕೆ ಅದ್ಯಾವ ರೀತಿ ನ್ಯಾಯ ದೊರಕಲಿದೆಯೋ ಕಾದು ನೋಡಬೇಕಿದೆ.

-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

12/06/2026 09:47 pm

Cinque Terre

15.51 K

Cinque Terre

2

ಸಂಬಂಧಿತ ಸುದ್ದಿ