ಧಾರವಾಡ: ತಮ್ಮ ಮಗನ ಶವ ಕಂಡು ಗೋಳಾಡುತ್ತಿರುವ ತಾಯಿ ಒಂದೆಡೆಯಾದರೆ, ಪತಿಯ ಶವ ಕಂಡು ಕಣ್ಣೀರ ಕೋಡಿ ಹರಿಸುತ್ತಿರುವ ಪತ್ನಿ. ಈ ಎಲ್ಲ ಮನಕಲುಕುವ ದೃಶ್ಯ ಕಂಡು ಬಂದದ್ದು ಧಾರವಾಡದ ಕೇಂದ್ರ ಕಾರಾಗೃಹದ ಸಿಬ್ಬಂದಿಯ ಕ್ವಾರ್ಟರ್ಸ್‌ನಲ್ಲಿ.
ಹೌದು! ಕರ್ತವ್ಯ ಲೋಪದ ಹಿನ್ನೆಲೆ ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಜೈಲರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿದ್ದರಾಮಪ್ಪ ವಡ್ಡರ (37) ಎಂಬ ಜೈಲರ್‌ನನ್ನು ಕಳೆದ ಕೆಲ ತಿಂಗಳ ಹಿಂದೆ ಅಮಾನತ್ತು ಮಾಡಿ ಆಡಳಿತಾತ್ಮಕ ಕಾರಣದಿಂದ ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಲಾಗಿತ್ತು.
ಸಿದ್ದರಾಮಪ್ಪ ವಡ್ಡರ ಅವರು ಗದಗ ಜಿಲ್ಲೆಯ ಗಜೇಂದ್ರಗಡದವರು. ಅವರನ್ನು ಮೈಸೂರಿಗೆ ವರ್ಗಾವಣೆ ಮಾಡಿದರೂ ಅವರು ಮಾತ್ರ ಮೈಸೂರು ಕಾರಾಗೃಹಕ್ಕೆ ಹೋಗಿ ಡ್ಯುಟಿ ರಿಪೋರ್ಟ್ ಮಾಡಿಕೊಂಡಿರಲಿಲ್ಲ. ಮಾನಸಿಕವಾಗಿ ಜರ್ಜರಿತರಾಗಿದ್ದ ಸಿದ್ದರಾಮಪ್ಪ ಅವರು ಧಾರವಾಡದ ಹೊಸ ಬಸ್ ನಿಲ್ದಾಣದ ಬಳಿಯ ಕ್ವಾರ್ಟರ್ಸ್‌ನಲ್ಲಿಯೇ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಹಲವು ಕಾರಣ ಹಾಗೂ ಆರೋಪವನ್ನು ಸಿದ್ದರಾಮಪ್ಪನ ಕುಟುಂಬಸ್ಥರು ಮಾಡುತ್ತಿದ್ದಾರೆ.
ಸಿದ್ದರಾಮಪ್ಪನನ್ನು ಕರ್ತವ್ಯ ಲೋಪದ ಹಿನ್ನೆಲೆ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್‌ಕುಮಾರ್ ಅಮಾನತ್ತು ಮಾಡಿ ಅವರನ್ನು ಮೈಸೂರಿಗೆ ವರ್ಗಾಯಿಸಲಾಗಿತ್ತು. ಆದರೆ, ಮೀಟಿಂಗ್‌ನಲ್ಲಿ ಅಲೋಕ್‌ಕುಮಾರ್ ಅವರು "ಶ್ರೀ ಶ್ರೀ ಸಿದ್ದರಾಮಪ್ಪ ಈ ರೀತಿ ತಪ್ಪು ಮಾಡಿದ್ದಿಯಲ್ಲಪ್ಪಾ ನಿನಗೆ ಏನು ಶಿಕ್ಷೆ ಕೊಡಬೇಕು" ಎಂದು ಬೆದರಿಕೆ ಹಾಕಿದ್ದರಂತೆ.
ಈ ಆರೋಪವನ್ನು ನಾವು ಮಾಡುತ್ತಿಲ್ಲ. ಸ್ವತಃ ಸಿದ್ದರಾಮಪ್ಪ ಅವರ ಕುಟುಂಬಸ್ಥರೇ ಮಾಡುತ್ತಿದ್ದಾರೆ. ನಿನ್ನ ಜೈಲಿಗೆ ಹಾಕುತ್ತಾರೆ ಎಂತಲೂ ಡಿಜಿಪಿ ಅವರು ಆತನಿಗೆ ಹೆದರಿಸಿದ್ದರಂತೆ ಇದರಿಂದ ಮಾನಸಿಕವಾಗಿ ನೊಂದ ಸಿದ್ದರಾಮಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಎಲ್ಲ ಕಾರಣಗಳನ್ನು ಮನದಲ್ಲಿಟ್ಟುಕೊಂಡೇ ಸಿದ್ದರಾಮಪ್ಪ ಮಾನಸಿಕವಾಗಿ ನೊಂದಿದ್ದರು ಎಂದು ಗೊತ್ತಾಗಿದೆ. ಆ ಕಾರಣದಿಂದಲೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರು ಕರೆ ಮಾಡಿದಾಗ ಸಿದ್ದರಾಮಪ್ಪ ಫೋನ್ ರಿಸಿವ್ ಮಾಡಿಲ್ಲ. ಪಕ್ಕದ ಮನೆಯವರು ಬಂದು ನೋಡಿದಾಗ ನೇಣು ಹಾಕಿಕೊಂಡಿದ್ದು ಗೊತ್ತಾಗಿದೆ.
ತಕ್ಷಣ ಅವರ ಕುಟುಂಬಸ್ಥರಿಗೆ ಮಾಹಿತಿ ಮುಟ್ಟಿಸಿದ್ದರಿಂದ ಕುಟುಂಬಸ್ಥರು ಸ್ಥಳಕ್ಕೆ ಬಂದು ರೋದಿಸುತ್ತಿದ್ದ ದೃಶ್ಯ ಕರುಳು ಹಿಂಡುವಂತಿತ್ತು.
ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕೂಡ ಭೇಟಿ ನೀಡಿ, ಈ ಬಗ್ಗೆ ತನಿಖೆ ನಡೆಸಲಾಗುತ್ತದೆ. ಸ್ಥಳಕ್ಕೆ ಸುಕೊ ಟೀಂ ಸಹ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಮನೆಯವರು ಯಾವ ರೀತಿ ದೂರು ನೀಡುತ್ತಾರೋ ಅದರ ಆಧಾರದ ಮೇಲೆ ತನಿಖೆ ನಡೆಸುತ್ತೇವೆ ಎಂದರು.
ಒಟ್ಟಾರೆ ಅಮಾನತ್ತಾಗಿದ್ದ ಜೈಲರ್ ಮಾನಸಿಕವಾಗಿಯೇ ಜರ್ಜರಿತರಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.
ಇನ್ನು ಅವರ ಮನೆಯವರು ಅಲೋಕ್‌ಕುಮಾರ್ ಅವರ ಮೇಲೆ ಆರೋಪ ಮಾಡಿದ್ದು, ಈ ಬಗ್ಗೆ ಪೊಲೀಸರು ಯಾವ ರೀತಿ ತನಿಖೆ ನಡೆಸುತ್ತಾರೋ ಕಾದು ನೋಡಬೇಕಿದೆ. ಈ ಸಂಬಂಧ ಉಪನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
12/06/2026 10:23 pm