ಭಟ್ಕಳ: ನಾಯಿಯನ್ನು ಶೆಡ್‌ನೊಳಗೆ ಕರೆತಂದ ವಿಚಾರಕ್ಕೆ ಆರಂಭವಾದ ಮಾತಿನ ಚಕಮಕಿ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸುವ ಮಟ್ಟಕ್ಕೆ ತಿರುಗಿ, ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ.
ಗಾಯಾಳು ಮೈನುದ್ದೀನ್ ಗೌಸ್ ಮೋಹಿದ್ದಿನ್ ಯಾದವಾಡ (44) ಅವರ ಪತ್ನಿ ಮುಬೀನಾ ಬಾನು ಮೈನುದ್ದಿನ್ ಯಾದವಾಡ ಅವರ ನೀಡಿದ ದೂರಿನ ಮೇರೆಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಮಧ್ಯಾಹ್ನ ಸುಮಾರು 1.10ರ ವೇಳೆಗೆ ಮೈನುದ್ದೀನ್ ಅವರು 4 ಸೀಸನ್ ಬಾರ್ & ರೆಸ್ಟೋರೆಂಟ್ ಪಕ್ಕದ ಶೆಡ್‌ನಲ್ಲಿ ಮದ್ಯಪಾನ ಮಾಡುತ್ತಿದ್ದರು. ಇದೇ ವೇಳೆ ಸಾಗರ ತಾಲೂಕಿನ ನಾಗುವಳ್ಳಿ-ಕೋಗಾರ ನಿವಾಸಿ ದಿನೇಶ ಪರಶು ಮರಾಠ (28) ನಾಯಿಯನ್ನು ಕರೆದುಕೊಂಡು ಅಲ್ಲಿಗೆ ಬಂದಿದ್ದಾನೆ. ನಾಯಿಯನ್ನು ಹೊರಗೆ ಕರೆದೊಯ್ಯುವಂತೆ ಮೈನುದ್ದೀನ್ ಹೇಳಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಈ ವೇಳೆ ಆಕ್ರೋಶಗೊಂಡ ದಿನೇಶ, ಅವಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಕೈಯಲ್ಲಿದ್ದ ಖಾಲಿ ಬಿಯರ್ ಬಾಟಲಿಯಿಂದ ಮೈನುದ್ದೀನ್ ಅವರ ತಲೆಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ಒಡೆದ ಬಾಟಲಿಯಿಂದ ಎದೆ ಭಾಗಕ್ಕೆ ಚುಚ್ಚಲು ಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಕೈ ಮುಂದಿಟ್ಟ ಮೈನುದ್ದೀನ್ ಅವರ ಎಡ ಮೊಣಕೈ ಸಮೀಪ ಗಂಭೀರ ಗಾಯವಾಗಿದೆ.
ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಭಟ್ಕಳ ನಗರ ಠಾಣೆಯ ಪಿಎಸ್ ಐ ನವೀನ ನಾಯ್ಕ ಹಾಗೂ ಸಿಬ್ಬಂದಿ ಗಾಯಾಳುವನ್ನು ಹೆದ್ದಾರಿ ಗಸ್ತು ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ದಿನೇಶ ಪರಶು ಮರಾಠನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
PublicNext
03/06/2026 09:34 pm