ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಿರಿಯಾನಿಯಲ್ಲಿ ಕೀಟ ಗ್ರಾಹಕನಿಗೆ 5 ಭಾನುವಾರ 10 ಬಿರಿಯಾನಿ ಫ್ರೀ ಕೊಡುವಂತೆ ಕೋರ್ಟ್ ಆದೇಶ

ಹೈದರಾಬಾದ : ಆಹಾರದಲ್ಲಿ ಕೀಟಗಳು ಪತ್ತೆಯಾಗುವುದು ಭಾರತದಲ್ಲಿ ಹೊಸದೇನಲ್ಲ, ಆದರೆ ಈ ಬಾರಿ ನ್ಯಾಯಾಲಯ ನೀಡಿದ ಆದೇಶ ಎಲ್ಲರ ಗಮನ ಸೆಳೆದಿದೆ. ಹೈದರಾಬಾದಿ ಚಿಕನ್ ಬಿರಿಯಾನಿ ತಿನ್ನುವಾಗ ಸತ್ತ ಕೀಟವೊಂದು ಪತ್ತೆಯಾದ ಪ್ರಕರಣದಲ್ಲಿ, ಪುದುಚೇರಿ ಗ್ರಾಹಕ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಹೈದರಾಬಾದಿ ಚಿಕನ್ ಬಿರಿಯಾನಿಯಲ್ಲಿ ಕೀಟ ಪತ್ತೆಯಾದ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಮುಂದಿನ 5 ಭಾನುವಾರಗಳ ಕಾಲ ಒಟ್ಟು 10 ಬಿರಿಯಾನಿಗಳನ್ನು ಉಚಿತವಾಗಿ ನೀಡುವಂತೆ ರೆಸ್ಟೋರೆಂಟ್‌ಗೆ ಪುದುಚೇರಿ ಗ್ರಾಹಕ ನ್ಯಾಯಾಲಯ ಆದೇಶಿಸಿದೆ.

ಪುದುಚೇರಿಯ ಸುಂದರ ಕುಮಾರ್ ಮಣಿಕಂದನ್ ಮತ್ತು ಅವರ ಸ್ನೇಹಿತ ಮೊಹಮ್ಮದ್ ನಿಯಾಸುದ್ದೀನ್ ಅವರು ಪುದುಚೇರಿಯ "ಬಿರಿಯಾನಿ ಆ್ಯಂಡ್ ಕೋ" ರೆಸ್ಟೋರೆಂಟ್‌ಗೆ ಬಿರಿಯಾನಿ ತಿನ್ನಲು ಹೋಗಿದ್ದರು. ಊಟದ ಪ್ಲೇಟ್‌ನಲ್ಲಿ ಸತ್ತ ನೊಣ ಪತ್ತೆಯಾದಾಗ ಇಬ್ಬರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಘಟನೆಯ ಕುರಿತು ಫೋಟೋ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿದ್ದ ಗ್ರಾಹಕರು, ಹೋಟೆಲ್ ವಿರುದ್ಧ ಗೂಗಲ್ ರಿವ್ಯೂವ್‌ನಲ್ಲಿ ಕೆಟ್ಟ ವಿಮರ್ಶೆ ಬರೆದು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಆರಂಭದಲ್ಲಿ ರೆಸ್ಟೋರೆಂಟ್ ತನ್ನ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆಯಾಚಿಸಿತ್ತು. ಆದರೆ, ಇಷ್ಟಕ್ಕೆ ಸುಮ್ಮನಾಗದ ಗ್ರಾಹಕರು ನ್ಯಾಯಾಲಯದ ಮೊರೆ ಹೋದರು. ಗೂಗಲ್ ರಿವ್ಯೂವ್‌ನಲ್ಲಿ ರೆಸ್ಟೋರೆಂಟ್ ಮಾಡಿದ್ದ ಸಾರ್ವಜನಿಕ ಕ್ಷಮೆಯಾಚನೆಯನ್ನೇ ಪ್ರಮುಖ ಸಾಕ್ಷ್ಯವಾಗಿ ನ್ಯಾಯಾಲಯದ ಮುಂದೆ ಇಟ್ಟಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಇಬ್ಬರು ಸ್ನೇಹಿತರ ಪರವಾಗಿ ತೀರ್ಪು ನೀಡಿದೆ. ಶುಚಿತ್ವವಿಲ್ಲದ, ಆರೋಗ್ಯಕ್ಕೆ ಹಾನಿಕಾರಕ ಆಹಾರ ಮತ್ತು ಮಾನಸಿಕ ಹಿಂಸೆ ನೀಡಿದ ಕಾರಣಕ್ಕಾಗಿ ರೆಸ್ಟೋರೆಂಟ್‌ಗೆ 10,000 ರೂಪಾಯಿ ದಂಡ ಹಾಗೂ ಕಾನೂನು ಹೋರಾಟದ ವೆಚ್ಚವಾಗಿ 3,000 ರೂಪಾಯಿ ಸೇರಿ ಒಟ್ಟು 13,000 ರೂಪಾಯಿ ದಂಡ ವಿಧಿಸಿದೆ.

ದುಬಾರಿ ದಂಡದ ಜೊತೆಗೆ, ನ್ಯಾಯಾಲಯವು ರೆಸ್ಟೋರೆಂಟ್‌ಗೆ ಇಬ್ಬರು ಸ್ನೇಹಿತರಿಗೆ ಪ್ರತಿ ಭಾನುವಾರ 2 ಹೈದರಾಬಾದಿ ಚಿಕನ್ ಬಿರಿಯಾನಿಗಳನ್ನು ನೀಡುವಂತೆ ಸೂಚಿಸಿದೆ. ಈ ಬಿರಿಯಾನಿಗಳು ತಾಜಾ ಆಗಿರಬೇಕು ಮತ್ತು ಎಲ್ಲಾ ಸುರಕ್ಷತಾ ಮಾನದಂಡಗಳನ್ನು ಪೂರೈಸಬೇಕು. ಹೀಗೆ ಐದು ಭಾನುವಾರಗಳ ಕಾಲ ಒಟ್ಟು 10 ಹೈದರಾಬಾದಿ ಚಿಕನ್ ಬಿರಿಯಾನಿಗಳನ್ನು ಉಚಿತವಾಗಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಗ್ರಾಹಕರ ರಕ್ಷಣಾ ಕಾಯ್ದೆ 2019 ರ ಅಡಿಯಲ್ಲಿ, ಕಲುಷಿತ ಮತ್ತು ಅಶುದ್ಧ ಆಹಾರವನ್ನು ನೀಡುವುದು ಅತ್ಯಂತ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಪುದುಚೇರಿ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗದ ಅಧ್ಯಕ್ಷ ಮುತ್ತುವೇಲ್ ಅವರಿದ್ದ ಪೀಠ ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

Edited By : Nirmala Aralikatti
PublicNext

PublicNext

09/06/2026 04:46 pm

Cinque Terre

34.32 K

Cinque Terre

1

ಸಂಬಂಧಿತ ಸುದ್ದಿ