ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಸಂವಿಧಾನಬದ್ಧ ಹಕ್ಕು. ಆ ನಿಟ್ಟಿನಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಮತದಾರ, ಬೂತ್ ಮಟ್ಟದ ಏಜೆಂಟ್ (BLA) ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಕರೆ ನೀಡಿದ್ದಾರೆ.
SIR ಪ್ರಕ್ರಿಯೆಯ ಉದ್ದೇಶ ಮತದಾರರ ಪಟ್ಟಿಯನ್ನು ನಿಖರಗೊಳಿಸುವುದಾಗಿದೆ. ಆದರೆ ಈ ಪ್ರಕ್ರಿಯೆಯ ಬಗ್ಗೆ ಅರಿವಿನ ಕೊರತೆ ಅಥವಾ ನಿರ್ಲಕ್ಷ್ಯ ಉಂಟಾದರೆ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಕೈತಪ್ಪುವುದು, ಹೊಸ ಮತದಾರರು ಸೇರ್ಪಡೆಯಾಗದೆ ಉಳಿಯುವುದು, ಅಗತ್ಯ ತಿದ್ದುಪಡಿಗಳು ಆಗದೆ ಉಳಿಯುವುದು ಅಥವಾ ಅನುಮಾನಾಸ್ಪದ ನೋಂದಣಿಗಳ ಕುರಿತು ಸಮಯಕ್ಕೆ ಆಕ್ಷೇಪಣೆ ಸಲ್ಲಿಕೆಯಾಗದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕತ್ವವು ತಮ್ಮ BLA ಗಳಿಗೆ ಸಮಗ್ರ ತರಬೇತಿ ನೀಡಿ, Form 6, Form 7 ಹಾಗೂ Form 8 ಗಳ ಬಳಕೆ, ಕರಡು ಮತದಾರರ ಪಟ್ಟಿಯ ಪರಿಶೀಲನೆ, ಆಕ್ಷೇಪಣೆ ಸಲ್ಲಿಸುವ ವಿಧಾನ ಮತ್ತು ನಿಗದಿತ ಕಾಲಮಿತಿಗಳ ಬಗ್ಗೆ ಸಂಪೂರ್ಣ ತಿಳುವಳಿಕೆ ನೀಡಬೇಕು. ಬೂತ್ ಮಟ್ಟದಲ್ಲಿ ಮನೆಮನೆ ಸಂಪರ್ಕ ನಡೆಸಿ ಪ್ರತಿಯೊಬ್ಬ ಮತದಾರರ ಹೆಸರು ಮತ್ತು ವಿವರಗಳನ್ನು ಪರಿಶೀಲಿಸುವ ಕಾರ್ಯವನ್ನು ತಕ್ಷಣ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಜೂನ್ 30 ರಿಂದ ಜುಲೈ 29ರೊಳಗೆ ಪ್ರತಿಯೊಬ್ಬ ಮತದಾರರು ತಮ್ಮ ಬೂತ್‌ನ BLO ಅವರನ್ನು ಸಂಪರ್ಕಿಸಿ Enumeration Form (EF) ಅನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕು. ಫಾರ್ಮ್‌ನಲ್ಲಿ ಕೇಳಲಾಗಿರುವ ವಿವರಗಳನ್ನು ಯಾವುದೇ ತಪ್ಪು ಅಥವಾ ಸುಳ್ಳು ಮಾಹಿತಿಯಿಲ್ಲದೆ ದಾಖಲಿಸುವುದು ಅತ್ಯಂತ ಮುಖ್ಯವಾಗಿದೆ. ಅಗತ್ಯವಿರುವ ಸಂದರ್ಭಗಳಲ್ಲಿ 2002ರ ಮತದಾರರ ಪಟ್ಟಿಯಲ್ಲಿನ ಮತದಾರನ ವಿವರ ಅಥವಾ ಆಗ ಆತ ಮತದಾನದ ಹಕ್ಕು ಪಡೆದಿರದಿದ್ದರೆ ಆತನ ತಂದೆ, ತಾಯಿ ಅಥವಾ ಅಜ್ಜ–ಅಜ್ಜಿಯರ ಮತದಾರರ ವಿವರಗಳನ್ನು ಒದಗಿಸಬೇಕಾಗಬಹುದು. ಆದ್ದರಿಂದ ಚುನಾವಣಾ ಆಯೋಗ ಕೇಳುವ 11 ದಾಖಲೆಗಳಲ್ಲಿ ಲಭ್ಯವಿರುವ ಅಗತ್ಯ ದಾಖಲೆಗಳನ್ನು ಮುಂಚಿತವಾಗಿಯೇ ಸಿದ್ಧವಾಗಿಟ್ಟುಕೊಳ್ಳುವಂತೆ ಅವರು ಮನವಿ ಮಾಡಿದರು.
ಪ್ರತಿಯೊಬ್ಬ ಮತದಾರರೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ, ಹೆಸರು, ವಿಳಾಸ, ವಯಸ್ಸು, ಫೋಟೋ ಹಾಗೂ ಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು. ಯಾವುದೇ ತಪ್ಪು ಕಂಡುಬಂದರೆ ತಕ್ಷಣ ಸಂಬಂಧಿತ ಅರ್ಜಿಗಳ ಮೂಲಕ ತಿದ್ದುಪಡಿ ಮಾಡಿಸಿಕೊಳ್ಳಬೇಕು. SIR ಪ್ರಕ್ರಿಯೆಯಲ್ಲಿ ಅಗತ್ಯ ಕ್ರಮಗಳನ್ನು ನಿರ್ಲಕ್ಷಿಸಿದರೆ ಮತದಾರರ ಪಟ್ಟಿಗೆ ಸಂಬಂಧಿಸಿದ ತೊಂದರೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಭಾಗವಹಿಸಬೇಕು ಎಂದು ಅವರು ಹೇಳಿದರು.
PublicNext
10/06/2026 10:47 am