ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕುಮಾರ ಮಂಗಿಲ ರಸ್ತೆ ದುಃಸ್ಥಿತಿ - ಕೊಂಕಣ ರೈಲ್ವೆ ಅನುಮತಿ ನಿರಾಕರಣೆ

ಮುಲ್ಕಿ: ಕಿಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಮಾರ ಮಂಗಿಲ ದೇವಸ್ಥಾನದ ಬಳಿಯ ಕಚ್ಚಾ ಮಣ್ಣಿನ ರಸ್ತೆ ಭಾರೀ ಮಳೆಗೆ ಸಂಪೂರ್ಣ ಕೆಸರುಮಯವಾಗಿದ್ದು, ಸಂಚಾರ ದುಸ್ತರವಾಗಿದೆ. ಕೊಂಕಣ ರೈಲ್ವೆ ಅಧಿಕಾರಿಗಳ ಅನುಮತಿ ನಿರಾಕರಣೆಯಿಂದ ರಸ್ತೆ ದುರಸ್ತಿ ಸಾಧ್ಯವಾಗದೆ ಸಂಚಾರ ದುಸ್ತರವಾಗಿದ್ದು, ಫ್ಲೈಓವರ್‌ ನಿರ್ಮಾಣಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮಂಗಳೂರು-ಉಡುಪಿ ಕೊಂಕಣ ರೈಲ್ವೆ ಹಳಿಗಳ ಪಕ್ಕದಲ್ಲಿ ಹಾದುಹೋಗುವ ಈ ರಸ್ತೆಯನ್ನು ಡಾಂಬರೀಕರಣಗೊಳಿಸಲು ಕೊಂಕಣ ರೈಲ್ವೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ಸುಮಾರು 60ಕ್ಕೂ ಹೆಚ್ಚು ಮನೆಗಳಿದ್ದು, ಸರ್ಕಾರಿ ಶಾಲೆ ಹಾಗೂ ಪ್ರಸಿದ್ಧ ಕಿಲ್ಪಾಡಿ ಶ್ರೀ ರಾಘವೇಂದ್ರ ಮಠ ಕೂಡ ಇದೆ. ನೂರಾರು ಜನರು ಈ ರಸ್ತೆಯನ್ನು ಬಳಸಿಕೊಂಡು ಪ್ರತಿದಿನ ಸಂಚರಿಸುತ್ತಿದ್ದು, ರಸ್ತೆಯ ಕೆಟ್ಟ ಪರಿಸ್ಥಿತಿಯಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ ಬೇಸಿಗೆಯಲ್ಲಿ ಸ್ಥಳೀಯ ದಾನಿಯೊಬ್ಬರು ರಸ್ತೆಯನ್ನು ತಾತ್ಕಾಲಿಕ ನೆಲೆಯಲ್ಲಿ ದುರಸ್ತಿಪಡಿಸಲು ಮುಂದಾದಾಗ, ರೈಲ್ವೆ ಇಲಾಖೆಯ ಅಧಿಕಾರಿಗಳು ಅಡ್ಡಿಪಡಿಸಿದ್ದರು. ಈ ಬಾರಿ ವಾಹನ ಸಂಚಾರದಿಂದ ರಸ್ತೆ ಮತ್ತಷ್ಟು ಹದಗೆಟ್ಟಿದ್ದು, ಪರಿಸ್ಥಿತಿ ತೀವ್ರವಾಗಿದೆ.

ಮುಲ್ಕಿ-ಕಿನ್ನಿಗೋಳಿ ರಾಜ್ಯ ಹೆದ್ದಾರಿಯಿಂದ ಕಿಲ್ಪಾಡಿ ಪಂಚಾಯಿತಿ ಬಳಿಯಿಂದ ಶಿಮಂತೂರು, ಕುಬೆವೂರು, ಕವತ್ತಾರು, ಬಳ್ಕುಂಜೆ ಸೇರಿದಂತೆ ಹಲವು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯ ಭಾಗದಲ್ಲಿ ಕೊಂಕಣ ರೈಲ್ವೆ ಹಳಿ ಹಾದುಹೋಗುವುದರಿಂದ ಇಲ್ಲಿ ಫ್ಲೈಓವರ್‌ ನಿರ್ಮಾಣದ ಅವಶ್ಯಕತೆ ಇದೆ.

ಈ ಬಗ್ಗೆ ಸ್ಥಳೀಯರು ಅನೇಕ ಬಾರಿ ಕೊಂಕಣ ರೈಲ್ವೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.

ಕೂಡಲೇ ಕೊಂಕಣ ರೈಲ್ವೆ ಅಧಿಕಾರಿಗಳು ಕುಮಾರ ಮಂಗಿಲ ರಸ್ತೆ ದುರಸ್ತಿಗೆ ಅವಕಾಶ ನೀಡುವ ಜೊತೆಗೆ, ಈ ಭಾಗದ ಜನತೆಯ ಬಹುದಿನಗಳ ಬೇಡಿಕೆಯಾದ ಫ್ಲೈಓವರ್‌ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ

Edited By : Somashekar
PublicNext

PublicNext

10/06/2026 11:57 am

Cinque Terre

3.31 K

Cinque Terre

0

ಸಂಬಂಧಿತ ಸುದ್ದಿ