ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಿ, ಗೋಹತ್ಯೆ ಮತ್ತು ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವ ಕಟ್ಟುನಿಟ್ಟಿನ ಕಾನೂನು ರೂಪಿಸಬೇಕೆಂದು ಕರ್ನಾಟಕ ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹಿಸಿದೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ವೇದಿಕೆಯ ವಕ್ತಾರ ಮುಸ್ತಾಕ್ ಹೆನ್ನಾಬೈಲು, ಈ ಸಂಬಂಧ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು.
ಬಿಜೆಪಿ ಸರಕಾರ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಗೋವಿನ ವಿಚಾರದ ರಾಜಕೀಯ ವಿಲಕ್ಷಣ ಮತ್ತು ವಿಚಿತ್ರವಾಗಿದೆ. ಇಡೀ ದೇಶದಲ್ಲಿರುವ ಮಾಂಸ ರಫ್ತು ಮಾಡುವ 10ಕ್ಕೂ ಹೆಚ್ಚು ದೊಡ್ಡ ರಫ್ತು ಕೇಂದ್ರಗಳು ಮುಸ್ಲಿಮರ ನಕಲಿ ಹೆಸರನ್ನು ಇಟ್ಟುಕೊಂಡು ಮುಸ್ಲಿಮರಲ್ಲದವರು ಅಕ್ರಮವಾಗಿ ನಡೆಸುತ್ತಿದ್ದಾರೆ.
ಯೋಗಿ ಆದಿತ್ಯನಾಥ್ ಆಡಳಿತದಲ್ಲಿರುವ ಉತ್ತರ ಪ್ರದೇಶ ರಾಜ್ಯದಿಂದ ವಿದೇಶಕ್ಕೆ ಅತ್ಯಂತ ಹೆಚ್ಚು ಗೋಮಾಂಸ ರಫ್ತಾಗುತ್ತಿದೆ ಎಂದು ಅವರು ದೂರಿದರು.
ಆಡಳಿತದಲ್ಲಿರುವ ಗೋವಾ ಮತ್ತು ಬಹುತೇಕ ಈಶಾನ್ಯ ರಾಜ್ಯಗಳಲ್ಲಿ ಗೋಮಾಂಸ ಸೇವನೆಗೆ ಯಾವುದೇ ಕಾನೂನು ಅಡ್ಡಿಯಿಲ್ಲದೇ ಮುಕ್ತ ಅವಕಾಶ ನೀಡಲಾಗಿದೆ. ಗೋವಿನ ಕುರಿತಂತೆ ಯಾವುದೇ ಕಾಳಜಿ ಮತ್ತು ಸೂಕ್ಷ್ಮತೆ ಇಲ್ಲದೇ ದೇಶದೊಳಗೆ ಬಿಜೆಪಿ ನಾಯಕರು ಒಳಗೊಂದು ಹೊರಗೊಂದು ನೀತಿಯನ್ನು ಅನುಸರಿಸುತ್ತಿದ್ದಾರೆಂದು ಅವರು ಟೀಕಿಸಿದರು.
ಭಾರತ ಇಡೀ ಜಗತ್ತಿನಲ್ಲಿಯೇ ಗೋಮಾಂಸ ರಫ್ತನಲ್ಲಿ ಎರಡನೇ ಸ್ಥಾನವನ್ನು ಗಳಿಸಿಕೊಂಡಿದೆ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಗೋ ಹತ್ಯೆ ಮತ್ತು ಗೋಮಾಂಸ ರಫ್ತು ನಿಷೇಧದ ಕುರಿತ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆ ಕೊಡದೆ ಯಾವುದೇ ಪೂರಕ ಕ್ರಮಗಳನ್ನು ಕೈಗೊಳ್ಳದಿರುವುದು ಬೇಸರ ಮೂಡಿಸಿದೆ.
ಗೋವಿನ ವಿಚಾರದಲ್ಲಿ ಏಕದೇಶ-ಏಕ ಕಾನೂನು ನೀತಿ ಅಡಿಯಲ್ಲಿ ಇಡೀ ದೇಶದಲ್ಲಿ ಗೋ ಹತ್ಯೆ ಮಾಂಸ ರಫ್ತನ್ನು ನಿಷೇಧಿಸುವ ಕಾನೂನು ರೂಪಿಸಬೇಕು. ಗೋವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು.
ದೇಶಾದ್ಯಂತವಿರುವ ಎಲ್ಲ ಕಸಾಯಿಖಾನೆಗಳನ್ನು ಮುಚ್ಚಿ ಗೋಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ವೇದಿಕೆಯ ವಕ್ತಾರ ಮುಸ್ತಾಕ್ ಹೆನ್ನಾಬೈಲು
PublicNext
10/06/2026 01:39 pm