ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ, 'ಅಭಿನಯ ಸರಸ್ವತಿ' ಶೃತಿ ಅವರ ವೃತ್ತಿಜೀವನದ ಮೈಲಿಗಲ್ಲಿನ 175ನೇ ಚಿತ್ರ ಮದರ್ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಚಿತ್ರದ ಮುಹೂರ್ತ ಸಮಾರಂಭವು ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ವಿಶೇಷ ಸಮಾರಂಭಕ್ಕೆ ಸ್ಯಾಂಡಲ್‌ವುಡ್ ನಟ ವಿನೋದ್ ಪ್ರಭಾಕರ್ ಆಗಮಿಸಿ ಶುಭ ಹಾರೈಸಿದರೆ, ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಇಡೀ ತಂಡಕ್ಕೆ ಬೆನ್ನುತಟ್ಟಿದರು.
ಶಾಂತ್ರು ಬ್ಯಾನರ್ ಅಡಿಯಲ್ಲಿ ಆರತಿ ಹಾಗೂ ಕೆ. ಸತೀಶ್ ಚಂದ್ರ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಾಕೇಶ್ ಸೋಮಣ್ಣ ನಿರ್ದೇಶನ ಮಾಡುತ್ತಿದ್ದಾರೆ. ಮಂಡ್ಯದ ಗ್ರಾಮೀಣ ಸೊಗಡಿನ ಹಿನ್ನೆಲೆಯಲ್ಲಿ ಮೂಡಿಬರಲಿರುವ ಈ ಚಿತ್ರವು ಪಕ್ಕಾ ಕಮರ್ಷಿಯಲ್ ಹಾಗೂ ಎಮೋಷನಲ್ ಕಥಾಹಂದರವನ್ನು ಹೊಂದಿದೆ. ಮಂಡ್ಯದ ಅನಕ್ಷರಸ್ಥ ಮಹಿಳೆಯೊಬ್ಬಳು ತನ್ನ ಸಂಸಾರವನ್ನು ಕಾಪಾಡಿಕೊಳ್ಳಲು ನಡೆಸುವ ಧೀಮಂತ ಹೋರಾಟವೇ ಈ 'ಮದರ್' ಚಿತ್ರದ ಮುಖ್ಯ ಕಥಾಹಂದರ. ಚಿತ್ರದಲ್ಲಿ ಶೃತಿ ಅವರು ಎಂದಿನಂತೆ ಪ್ರೇಕ್ಷಕರನ್ನು ಅಳಿಸದೆ, ತೀರಾ ವಿಭಿನ್ನವಾದ ಮತ್ತು ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.
ಈ ಚಿತ್ರದ ಕುರಿತು ಮಾತನಾಡಿದ ಶೃತಿ ಅವರು, ತಮ್ಮನ್ನು ಚಿತ್ರರಂಗಕ್ಕೆ ಪರಿಚಯಿಸಿದ ಡಾ. ರಾಜ್‌ಕುಮಾರ್ ಹಾಗೂ ಬ್ರೇಕ್ ನೀಡಿದ ದ್ವಾರಕೀಶ್ ಅವರನ್ನು ಸ್ಮರಿಸಿದರು. ಅಲ್ಲದೆ, ತಮ್ಮ ಸುದೀರ್ಘ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ವರ್ಕ್‌ಶಾಪ್‌ನಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು. ಚಿತ್ರದಲ್ಲಿ ನಟ ಚಿರಂಜೀವಿ ಅವರು ಶೃತಿ ಅವರ ಮಗನಾಗಿ ರಫ್ ಅಂಡ್ ರಗಡ್ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ ಪ್ರಸನ್ನ ಶೆಟ್ಟಿ, ಅರ್ಚನಾ ಹೆಗ್ಡೆ, ಅಭಯ್ ಪುನೀತ್, ಗೀತಾಂಜಲಿ ಹಾಗೂ ಹಿಮಶ್ರೀ ಚಿತ್ರದ ದೊಡ್ಡ ತಾರಾಬಳಗದಲ್ಲಿದ್ದಾರೆ.
ಅಂಜನ್ ಅವರ ಸಂಗೀತ ನಿರ್ದೇಶನ, ಯು. ಅಶ್ವಿನ್ ಅವರ ಛಾಯಾಗ್ರಹಣ, ವಸಂತ್ ಅವರ ಸಂಕಲನ ಹಾಗೂ ನಾಗಾರ್ಜುನ ಶರ್ಮಾ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಮಂಡ್ಯದ ಸುತ್ತಮುತ್ತ ಸತತ 35 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲು ನಿರ್ದೇಶಕರು ಯೋಜಿಸಿದ್ದು, ಸದ್ಯದಲ್ಲೇ ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾಗಲಿದೆ.
PublicNext
11/06/2026 12:51 pm