ಬೆಂಗಳೂರು: ಕಾಂತಾರ ಚಿತ್ರದ ನಟಿ ರುಕ್ಮಿಣಿ ವಸಂತ್ ಅವರ ಡೀಪ್‌ಫೇಕ್ ಬಿಕಿನಿ ಫೋಟೋ ವೈರಲ್ ಪ್ರಕರಣದ ತನಿಖೆಯನ್ನು ಸೈಬರ್ ಕ್ರೈಂ ಪೊಲೀಸರು ಚುರುಕುಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದ ಇನ್‌ಸ್ಟಾಗ್ರಾಂ, ಎಕ್ಸ್ ಮತ್ತು ಫೇಸ್‌ಬುಕ್ ಖಾತೆಗಳ ವಿರುದ್ಧ ನಟಿ ದೂರು ನೀಡಿದ್ದರು.
ಸೈಬರ್ ಕ್ರೈಂ ಪೊಲೀಸರ ತನಿಖೆಯಲ್ಲಿ, ಬಹುತೇಕ ಆರೋಪಿಗಳು ಹೊರ ರಾಜ್ಯದವರಾಗಿದ್ದು, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಿಂದ ಕಾರ್ಯಾಚರಣೆ ನಡೆಸುತ್ತಿರುವುದು ಪತ್ತೆಯಾಗಿದೆ.
ಕೆಲ ದಿನಗಳ ಹಿಂದೆ ರುಕ್ಮಿಣಿ ವಸಂತ್ ಅವರ ಈಜುಡುಗೆಯಲ್ಲಿನ ಡೀಪ್‌ಫೇಕ್ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಎಐ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಕಿಡಿಗೇಡಿಗಳು ರುಕ್ಮಿಣಿ ವಸಂತ್ ಅವರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ, ಬಿಕಿನಿ ಫೋಟೋಗಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ತೇಜೋವಧೆ ಮಾಡುತ್ತಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನಟಿ, ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಿಸುವ ಮೊದಲು, ವೈರಲ್ ಆಗಿದ್ದ ಫೋಟೋಗಳು ಅಸಲಿಯೇ ಅಥವಾ ಎಐ ಸೃಷ್ಟಿಸಿದ್ದೇ ಎಂಬುದನ್ನು ನಟಿಯಿಂದ ಮಾಹಿತಿ ಪಡೆದು ಪೊಲೀಸರು ಖಚಿತಪಡಿಸಿಕೊಂಡಿದ್ದರು.
ದೂರಿನ ಆಧಾರದ ಮೇಲೆ ತನಿಖೆಗೆ ಇಳಿದ ಪೊಲೀಸರು, ತಾಂತ್ರಿಕ ಮಾಹಿತಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಖಾತೆಗಳ ವಿವರಗಳನ್ನು ಸಂಗ್ರಹಿಸಿದಾಗ, ಅವು ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಹೊರ ರಾಜ್ಯದ ವ್ಯಕ್ತಿಗಳಿಗೆ ಸೇರಿರುವುದು ತಿಳಿದುಬಂದಿದೆ. ಪ್ರಕರಣ ದಾಖಲಾದ ನಂತರ ಈ ಖಾತೆಗಳನ್ನು ಬಂದ್ ಮಾಡಲಾಗಿದೆ. ಸದ್ಯ, ಈ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ತೀವ್ರ ಶೋಧ ಕಾರ್ಯ ಮುಂದುವರಿದಿದೆ.
PublicNext
11/06/2026 01:08 pm