ಬೆಂಗಳೂರು : ಪ್ರಸ್ತುತ ಸಮಾಜದಲ್ಲಿ ಹಳ್ಳಿ ಹಾಗೂ ನಗರ ಪ್ರದೇಶದ ಗಂಡು ಮಕ್ಕಳು ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾದ 'ಮದುವೆಗೆ ಹೆಣ್ಣು ಸಿಗದಿರುವುದು' ಎಂಬ ಕಥಾಹಂದರವನ್ನು ಇಟ್ಟುಕೊಂಡು ನಾಗೂಗೆ ವಧು ಬೇಕಾಗಿದೆ'ಎಂಬ ನೈಜ ಘಟನೆ ಆಧಾರಿತ ಸಿನಿಮಾ ಸಿದ್ಧವಾಗಿದೆ. ಶ್ರೀಗುರು ರಾಘವೇಂದ್ರ ಕನ್ನಡ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಶೀರ್ಷಿಕೆ, ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು.
ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ ಅವರು ಚಿತ್ರದ ಟ್ರೇಲರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರದಲ್ಲಿರುವ ತಾಯಿ-ಮಗನ ಬಾಂಧವ್ಯದ ಸನ್ನಿವೇಶಗಳು ಮನಸ್ಸಿಗೆ ಹತ್ತಿರವಾಗುವಂತಿವೆ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಇನ್ನು ಚಿತ್ರದ ಆಕರ್ಷಕ ಶೀರ್ಷಿಕೆಯನ್ನು ನಿರ್ದೇಶಕ 'ಬಹದ್ದೂರ್' ಚೇತನ್ ಕುಮಾರ್ ಅನಾವರಣಗೊಳಿಸಿದರು.
ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಆರ್.ಕೆ. ಮಾತನಾಡಿ, "ಇಂದಿನ ಹುಡುಗಿಯರು ಸರ್ಕಾರಿ ಕೆಲಸ, ಸ್ವಂತ ಮನೆ ಹಾಗೂ ಅತ್ತೆ-ಮಾವ ಇರಬಾರದು ಎಂಬಂತಹ ಬೇಡಿಕೆಗಳನ್ನು ಇಡುತ್ತಿರುವುದರಿಂದ ಸಾಮಾನ್ಯ ಹುಡುಗರಿಗೆ ಮದುವೆ ಆಗುವುದು ಕಷ್ಟವಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಸಿನಿಮಾ ಮಾಡಲಾಗಿದ್ದು, ಮುಂದಿನ ತಿಂಗಳು ತೆರೆಗೆ ತರಲು ಸಜ್ಜಾಗಿದ್ದೇವೆ" ಎಂದರು. ಚಿತ್ರದಲ್ಲಿ ದತ್ತು ಪೂಜಾರಿ ನಾಯಕನಾಗಿ 'ನಾಗು' ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸೋನಿಕಾ ಸೋಮಣ್ಣ, ಚಿತ್ರಾಲ್ ರಂಗಸ್ವಾಮಿ, ಅಪೂರ್ವಶ್ರೀ ಹಾಗೂ ರೇಖಾದಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಸುರೇಶ್ ಸಂಗೀತ ನೀಡಿದ್ದು, ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ.
PublicNext
11/06/2026 02:03 pm