ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕ ಹಾಗೂ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಸಹಿ ಪೋರ್ಜರಿ ಪ್ರಕರಣದಲ್ಲಿ ಕೋಲ್ಕತ್ತಾ ಹೈಕೋರ್ಟ್ ಮಹತ್ವದ ಮಧ್ಯಂತರ ರಿಲೀಫ್ ನೀಡಿದೆ. ಪ್ರಕರಣದ ತನಿಖೆ ಮುಂದುವರಿದಿರುವ ವೇಳೆ ಅವರ ವಿರುದ್ಧ ಯಾವುದೇ ಬಂಧನ ಅಥವಾ ಬಲವಂತದ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.
ಆದರೆ, ಅಭಿಷೇಕ್ ಬ್ಯಾನರ್ಜಿ ಅವರು ಸಿಐಡಿ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿ ಕೌಸಿಕ್ ಚಂದಾ ಅವರ ಪೀಠ, ದೆಹಲಿಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ಅವರು ಸಂಜೆ 6 ಗಂಟೆಯೊಳಗೆ ಕೋಲ್ಕತ್ತಾದ ಸಿಐಡಿ ಕಚೇರಿಗೆ ಹಾಜರಾಗುವಂತೆ ಸೂಚಿಸಿದೆ.
ಈ ಪ್ರಕರಣವು ಪಶ್ಚಿಮ ಬಂಗಾಳ ವಿಧಾನಸಭೆಯ ಪ್ರತಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳಲ್ಲಿ ಶಾಸಕರ ಸಹಿಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದೆ. ಮಮತಾ ಬ್ಯಾನರ್ಜಿ ನಿವಾಸದಲ್ಲಿ ನಡೆದ ಸಭೆಯ ನಿರ್ಣಯ ದಾಖಲೆಗಳಲ್ಲಿನ ಸಹಿಗಳ ಬಗ್ಗೆ ವಿವಾದ ಎದ್ದಿದ್ದು, ಕೆಲ ಶಾಸಕರು ತಾವು ಯಾವುದೇ ದಾಖಲೆಗಳಿಗೆ ಸಹಿ ಮಾಡಿಲ್ಲ ಎಂದು ಹೇಳಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಅಭಿಷೇಕ್ ಅವರಿಗೆ ರಕ್ಷಣೆ ನೀಡುವುದನ್ನು ವಿರೋಧಿಸಿದರೆ, ಅವರ ಪರ ವಕೀಲರು ಆರೋಪಗಳನ್ನು ತಳ್ಳಿ ಹಾಕಿದರು. ಇದೀಗ ಎರಡು ವಾರಗಳ ಬಳಿಕ ಪ್ರಕರಣ ಮತ್ತೆ ವಿಚಾರಣೆಗೆ ಬರಲಿದ್ದು, ಅಷ್ಟರೊಳಗೆ ಸಿಐಡಿ ತನಿಖಾ ವರದಿ ಸಲ್ಲಿಸಬೇಕಾಗಿದೆ.
PublicNext
11/06/2026 06:50 pm
LOADING...