ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಕಳಂಕ ತರಲು ತೆರೆಯ ಮರೆಯಲ್ಲಿ ಬರೋಬ್ಬರಿ 200 ಕೋಟಿ ರೂಪಾಯಿಗಳ ಬೃಹತ್ ಪ್ರಾಜೆಕ್ಟ್‌ನೊಂದಿಗೆ ನಡೆದಿದ್ದ ಮಹಾ ಸಂಚೊಂದು ಈಗ ಸಂಪೂರ್ಣವಾಗಿ ಬಯಲಾಗಿದೆ.
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ‘ಬುರುಡೆ ಕೇಸ್’ಗೆ ಸಂಬಂಧಿಸಿದಂತೆ ಸ್ಫೋಟಕ ದಾಖಲೆಗಳು ಲಭ್ಯವಾಗಿದ್ದು, ಇಡೀ ಗ್ಯಾಂಗ್‌ನ ಅಂತರರಾಜ್ಯ ಮಟ್ಟದ ಹುನ್ನಾರ ಸಾರ್ವಜನಿಕವಾಗಿ ಅನಾವರಣಗೊಂಡಿದೆ.
ಆರೋಪಿ ಚಿನ್ನಯ್ಯನ ಸ್ಫೋಟಕ ಸತ್ಯಗಳು
ಈ ಮಹಾ ಸಂಚಿನ ಕೇಂದ್ರ ಬಿಂದುವಾಗಿರುವ ಪ್ರಕರಣದ ಆರೋಪಿ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಹಲವು ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಕ್ಷೇತ್ರಕ್ಕೆ ಕಳಂಕ ತರುವ ಈ ಕುತಂತ್ರದ ಹಿಂದೆ ಅಂತರರಾಜ್ಯ ಮಟ್ಟದ ದೊಡ್ಡ ಆರ್ಥಿಕ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ.
ಧರ್ಮಸ್ಥಳದ ವಿರುದ್ಧ ಹೋರಾಟ ನಡೆಸಲು ಕೇರಳದಿಂದ ಹಣದ ಹರಿವು ಹರಿದುಬಂದಿದ್ದು, ಈ ಕಾರ್ಯಾಚರಣೆ ಯಶಸ್ವಿಯಾದರೆ ಚಿನ್ನಯ್ಯನಿಗೆ 50 ಲಕ್ಷ ರೂ. ನೀಡುವುದಾಗಿ ಗ್ಯಾಂಗ್ ಆಮಿಷ ಒಡ್ಡಿತ್ತು ಎಂದು ಆರೋಪಿಸಿದ್ದಾನೆ.
ಚಿನ್ನಯ್ಯ ತನ್ನ ಅರ್ಜಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲಗೌಡ ಮತ್ತು ಜಯಂತ್ ಸೇರಿದಂತೆ ಪ್ರಮುಖ ರೂವಾರಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾನೆ.
ತಾನು ನಿಜವಾದ ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಿದರೂ ಸಹ ವಿಶೇಷ ತನಿಖಾ ದಳ (SIT) ಅವರ ವಿರುದ್ಧ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಚಿನ್ನಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಪ್ರಕರಣದ ತನಿಖೆಯ ಪ್ರಗತಿಯ ಮಾಹಿತಿ ನೀಡುವಂತೆ ಕೋರಿ ಆತ ನ್ಯಾಯಾಲಯದ ಮೊರೆ ಹೋಗಿದ್ದಾನೆ.
'ಪ್ರಕಾಶ್ ರಾಜ್' ಯಾರು? ಹೊಸ ತಿರುವು
ಚಿನ್ನಯ್ಯ ಸಲ್ಲಿಸಿರುವ ಅರ್ಜಿಯಲ್ಲಿ ಮತ್ತೊಂದು ಅತ್ಯಂತ ರೋಚಕ ತಿರುವು ಸಿಕ್ಕಿದ್ದು ‘ಪ್ರಕಾಶ್ ರಾಜ್’ ಎಂಬ ವ್ಯಕ್ತಿಯ ಹೆಸರು ಉಲ್ಲೇಖವಾಗಿದೆ. ಚಿನ್ನಯ್ಯನ ಜೊತೆ ಅತ್ಯಂತ ಆಪ್ತವಾಗಿ, ತಮಿಳು ಭಾಷೆಯಲ್ಲಿ ಮಾತನಾಡಿದ್ದ ಈ ಪ್ರಕಾಶ್ ರಾಜ್, “ಬುರುಡೆ ಗ್ಯಾಂಗ್ ಹೇಳಿದಂತೆ ನೀನು ಕೇಳಿದರೆ, ನಿನ್ನನ್ನು ನಾನು ಅಪ್ಪಿಕೊಳ್ಳುತ್ತೇನೆ. ಜೂನ್ 29ನೇ ತಾರೀಖು ಬಂದು ನಿನ್ನನ್ನು ತಬ್ಬಿಕೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾಗಿ ಚಿನ್ನಯ್ಯ ವಿವರಿಸಿದ್ದಾನೆ.
ಚಿನ್ನಯ್ಯನ ಬಳಿ ತಮಿಳಿನಲ್ಲಿ ಮಾತನಾಡಿದ ಈ ಪ್ರಕಾಶ್ ರಾಜ್ ಯಾರು? ಬುರುಡೆ ಕೇಸ್‌ಗೂ ಈ ವ್ಯಕ್ತಿಗೂ ಇರುವ ನಂಟೇನು ಎಂಬುದನ್ನು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಎಲ್ಲೂ ಸ್ಪಷ್ಟಪಡಿಸಿಲ್ಲ. ಇದು ಸದ್ಯಕ್ಕೆ ದೊಡ್ಡ ಸಸ್ಪೆನ್ಸ್ ಆಗಿ ಉಳಿದಿದ್ದು, ಪ್ರಕರಣಕ್ಕೆ ಹೊಸ ಆಯಾಮವನ್ನು ನೀಡಿದೆ.
ಹೈಕೋರ್ಟ್‌ನಿಂದ SITಗೆ ನೋಟಿಸ್
ಚಿನ್ನಯ್ಯ ಸಲ್ಲಿಸಿರುವ ಈ ರಿಟ್ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಬುರುಡೆ ಪ್ರಕರಣದ ತನಿಖೆಯ ಸದ್ಯದ ಸ್ಥಿತಿ ಹಾಗೂ ಪ್ರಗತಿಯ ಕುರಿತು ಮಾಹಿತಿ ನೀಡುವಂತೆ ರಾಜ್ಯ ಸರ್ಕಾರ ಮತ್ತು ವಿಶೇಷ ತನಿಖಾ ತಂಡಕ್ಕೆ (SIT) ನೋಟಿಸ್ ಜಾರಿ ಮಾಡಿದೆ. ಅಲ್ಲದೆ ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 29ಕ್ಕೆ ಮುಂದೂಡಿದೆ.
PublicNext
11/06/2026 10:34 pm