ಸೂರತ್ (ಗುಜರಾತ್) : ಸಿನಿಮೀಯ ಶೈಲಿಯ ಸಾಹಸವೊಂದರಲ್ಲಿ, ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಪೊಲೀಸ್ ಕಾನ್ಸ್‌ಟೇಬಲ್ ಶೈಲೇಶ್ ಚುಡಾಸಮ 7ನೇ ಮಹಡಿಯ ಫ್ಲಾಟ್‌ನ ಹೊರಗಿನ ಗ್ರಿಲ್ ಮೂಲಕ ಅಪಾಯಕಾರಿಯಾಗಿ ಒಳನುಗ್ಗಿ, ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಯುವಕನೊಬ್ಬನನ್ನು ರಕ್ಷಿಸಿದ್ದಾರೆ.
ಸೂರತ್ ನಗರದ ಲಸ್ಕಾನಾ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ರೋಮಾಂಚಕ ಘಟನೆ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ 'ರಿಯಲ್ ಲೈಫ್ ಹೀರೋ'ಗೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ತನ್ನ ಪ್ರಾಣವನ್ನೇ ಪಣಕ್ಕಿಟ್ಟು, 7ನೇ ಮಹಡಿಯ ಗ್ರಿಲ್ ಮೂಲಕ ಅಪಾಯಕಾರಿಯಾಗಿ ಒಳನುಗ್ಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಜೀವ ಉಳಿಸಿದ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಸಾಹಸಮಯ ಕಾರ್ಯಾಚರಣೆಯನ್ನು ಗುಜರಾತ್ ಉಪಮುಖ್ಯಮಂತ್ರಿ ಹರ್ಷ್ ಸಂಘವಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ನಮ್ಮ ಪೊಲೀಸರ ಈ ಧೈರ್ಯ ಮತ್ತು ಕರ್ತವ್ಯ ನಿಷ್ಠೆ ನಿಜಕ್ಕೂ ಹೆಮ್ಮೆ ತರುವಂತದ್ದು. ಒಂದು ಅಮೂಲ್ಯ ಜೀವವನ್ನು ಉಳಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಅಧಿಕಾರಿಗಳಿಗೆ ನನ್ನ ಸಲಾಂ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಘಟನೆ ನಡೆದ ದಿನ, ಲಸ್ಕಾನಾ ಪ್ರದೇಶದ ಹೈರೈಸ್ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯ ಫ್ಲಾಟ್ ಒಂದರಲ್ಲಿ ವ್ಯಕ್ತಿಯೊಬ್ಬ ಒಳಗಿನಿಂದ ಲಾಕ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆ ಎಂಬ ಗಾಬರಿ ಮೂಡಿಸುವ ಕರೆ ಸೂರತ್ ನಗರ ಪೊಲೀಸ್ ನಿಯಂತ್ರಣ ಕೊಠಡಿಯ 'ಡಯಲ್ 112' ತುರ್ತು ಸೇವೆಗೆ ಬಂದಿತ್ತು. ಕರೆ ಸ್ವೀಕರಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಇಆರ್‌ವಿ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಜಂಟಿ ತಂಡ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಧಾವಿಸಿತು.
ಸ್ಥಳಕ್ಕೆ ತಲುಪಿದ ತಂಡಕ್ಕೆ ಫ್ಲಾಟ್‌ನ ಮುಖ್ಯ ಬಾಗಿಲು ಒಳಗಿನಿಂದ ಗಟ್ಟಿಯಾಗಿ ಲಾಕ್ ಆಗಿರುವುದು ಕಂಡುಬಂದಿತು. ಬಾಗಿಲು ಒಡೆದು ಒಳಗೆ ಹೋಗುವಷ್ಟರಲ್ಲಿ ಸಮಯ ನಷ್ಟವಾಗಿ, ಅನಾಹುತ ಸಂಭವಿಸುವ ಅಪಾಯವಿತ್ತು. ಈ ನಿರ್ಣಾಯಕ ಕ್ಷಣದಲ್ಲಿ, ಪೊಲೀಸ್ ಕಾನ್ಸ್‌ಟೇಬಲ್ ಶೈಲೇಶ್ ಚುಡಾಸಮಾ ಅವರು ಅಸಾಮಾನ್ಯ ಧೈರ್ಯ ಪ್ರದರ್ಶಿಸಿದರು.
7ನೇ ಮಹಡಿಯ ಎತ್ತರದ ಭೀತಿಯನ್ನು ಬದಿಗಿಟ್ಟು, ಅಪಾರ್ಟ್‌ಮೆಂಟ್‌ನ ಹೊರಭಾಗದ ಕಿರಿದಾದ ಗೋಡೆಯ ಅಂಚಿನ ಮೇಲೆ ನಡೆದು, ಕಿಟಕಿಯ ಕಬ್ಬಿಣದ ಗ್ರಿಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ಶೈಲೇಶ್ ಅವರು ಅತ್ಯಂತ ಜಾಗರೂಕತೆಯಿಂದ ಫ್ಲಾಟ್‌ನೊಳಗೆ ಪ್ರವೇಶಿಸಿದರು. ಒಳಗೆ ಹೋಗುತ್ತಿದ್ದಂತೆ ನೇಣಿಗೆ ಶರಣಾಗಲು ಮುಂದಾಗಿದ್ದ ವ್ಯಕ್ತಿಯನ್ನು ಕೊನೆಯ ಕ್ಷಣದಲ್ಲಿ ತಡೆದು, ಆತನನ್ನು ಸುರಕ್ಷಿತವಾಗಿ ಕೆಳಕ್ಕೆ ಇಳಿಸುವಲ್ಲಿ ಯಶಸ್ವಿಯಾದರು.
ಬಾಗಿಲು ಒಡೆಯುವವರೆಗೂ ಕಾಯದೆ, ಸಮಯಪ್ರಜ್ಞೆ ಮೆರೆದು ಕಿಟಕಿಯ ಮೂಲಕ ಜೀವದ ಹಂಗು ತೊರೆದು ಒಳ ನುಗ್ಗಿದ ಕಾನ್‌ಸ್ಟೆಬಲ್ ಶೈಲೇಶ್ ಮತ್ತು ಇಡೀ 'ಡಯಲ್ 112' ತಂಡದ ಕಾರ್ಯಾಚರಣೆಯ ವಿಡಿಯೋಗಳು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗುತ್ತಿವೆ. ನೆಟ್ಟಿಗರು ಇವರನ್ನು "ನಿಜವಾದ ಸೂಪರ್ ಹೀರೋಗಳು" ಎಂದು ಕೊಂಡಾಡುತ್ತಿದ್ದಾರೆ. ಸಕಾಲದಲ್ಲಿ ಸ್ಪಂದಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಕ್ಕೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
12/06/2026 08:09 am