ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ಭಾರತ್-ಪಾಕ್ ಪಂದ್ಯದ ನಡುವೆ ಬ್ಯಾಟರ್ ಮೇಲೆ ಪಾಕಿಸ್ತಾನಿ ಆಟಗಾರ್ತಿ ಹಲ್ಲೆ?! ವೈರಲ್ ವಿಡಿಯೋದ ಅಸಲಿಯತ್ತೇನು?

ಬರ್ಮಿಂಗ್‌ಹ್ಯಾಮ್: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಜಗತ್ತಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಕಾಣುವುದೆಲ್ಲವನ್ನೂ ನಂಬಲು ಸಾಧ್ಯವೇ ಇಲ್ಲ ಎನ್ನುವುದಕ್ಕೆ ಮತ್ತೊಂದು ಶಾಕಿಂಗ್ ಉದಾಹರಣೆ ಸಿಕ್ಕಿದೆ. ಭಾನುವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್ 2026ರ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸುತ್ತಿದ್ದಂತೆ, ಇಂಟರ್ನೆಟ್‌ನಲ್ಲಿ ಒಂದು ವಿಡಿಯೋ ಕಾಳ್ಗಿಚ್ಚಿನಂತೆ ಹರಡಿದೆ.

ಆ ವಿಡಿಯೋದಲ್ಲಿ ಪಾಕಿಸ್ತಾನಿ ಆಟಗಾರ್ತಿಯೊಬ್ಬರು ಭಾರತೀಯ ಬ್ಯಾಟರ್ ಮೇಲೆ ಮೈದಾನದ ಮಧ್ಯದಲ್ಲೇ ಹಲ್ಲೆ ನಡೆಸುತ್ತಿರುವುದು ಮತ್ತು ಅಂಪೈರ್ ಹಾಗೂ ಉಳಿದ ಆಟಗಾರ್ತಿಯರು ಬಂದು ಇಬ್ಬರನ್ನೂ ಬಿಡಿಸುತ್ತಿರುವುದು ಕಾಣಿಸುತ್ತದೆ. ಭಾರತ ಮತ್ತು ಪಾಕ್ ಕ್ರಿಕೆಟ್ ಅಭಿಮಾನಿಗಳಲ್ಲಿ ಈ ವಿಡಿಯೋ ತೀವ್ರ ಆಕ್ರೋಶ ಮತ್ತು ಗೊಂದಲ ಮೂಡಿಸಿತ್ತು. ಆದರೆ, ನಾವಿಲ್ಲಿ ಹೇಳಲೇಬೇಕಾದ ಅಸಲಿ ಸತ್ಯವೆಂದರೆ ಈ ವಿಡಿಯೋ ಸಂಪೂರ್ಣ ನಕಲಿ (Fake)!

ಮೈದಾನದಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಮ್ಯಾಚ್ ಮುಗಿದ ಬೆನ್ನಲ್ಲೇ ಕಿಡಿಗೇಡಿಗಳು AI ತಂತ್ರಜ್ಞಾನ ಬಳಸಿ ಈ ಸುಳ್ಳು ವಿಡಿಯೋ ಸೃಷ್ಟಿಸಿ ವೈರಲ್ ಮಾಡಿದ್ದಾರೆ. ಆದರೆ ಪಂದ್ಯದ ವೇಳೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಪಾಕ್ ನಾಯಕಿ ಫಾತಿಮಾ ಸನಾ ಶೇಖ್ ನಡುವೆ ಕೆಲ ಕ್ಷಣಗಳ ಕಾಲ ಮಾತಿನ ಚಕಮಕಿ ನಡೆದಿದ್ದು ಮಾತ್ರ ನಿಜವಾಗಿತ್ತು

ಸುಳ್ಳು ವಿಡಿಯೋಗಳ ಸುದ್ದಿಯ ನಡುವೆ, ಅಸಲಿ ಮೈದಾನದಲ್ಲಿ ಭಾರತೀಯ ಆಟಗಾರ್ತಿಯರು ಪಾಕಿಸ್ತಾನಕ್ಕೆ ಧೂಳೀಪಟ ಮಾಡಿದ್ದಾರೆ.

ಸ್ಮೃತಿ ಮಂಧಾನ ಅವರ ಅಮೋಘ ಅರ್ಧಶತಕ ಹಾಗೂ ರಿಚಾ ಘೋಷ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಭರ್ಜರಿ ರನ್ ಕಲೆಹಾಕಿತು. ಬೌಲಿಂಗ್‌ನಲ್ಲಿ ಮಂತ್ರಮುಗ್ದರನ್ನಾಗಿಸಿದ ದೀಪ್ತಿ ಶರ್ಮಾ, ಕೇವಲ 10 ರನ್ ನೀಡಿ 5 ವಿಕೆಟ್ ಕಡಿಯುವ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಅಂತಿಮವಾಗಿ 50-ಓವರ್‌ಗಳ ವಿಶ್ವಚಾಂಪಿಯನ್ ಭಾರತ ತಂಡ, 64 ರನ್‌ಗಳ ಬೃಹತ್ ಅಂತರದಿಂದ ಪಾಕಿಸ್ತಾನವನ್ನು ಮಣಿಸಿ ವಿಶ್ವಕಪ್ ಅಭಿಯಾನಕ್ಕೆ ವಿಜಯದ ಆರಂಭ ನೀಡಿದೆ.

ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ದೀಪ್ತಿ ಶರ್ಮಾ ಪಂದ್ಯದ ನಂತರ ಮಾತನಾಡಿ, "ನನಗೆ ತುಂಬಾ ಖುಷಿಯಾಗಿದೆ. ಇಂತಹ ಸ್ಪಿನ್ ಪಿಚ್‌ಗಳಲ್ಲಿ ಬೌಲಿಂಗ್ ಮಾಡುವುದೆಂದರೆ ಇಷ್ಟ. ಈ ಯಶಸ್ಸಿನ ಕ್ರೆಡಿಟ್ ತಂಡಕ್ಕೆ ಸಲ್ಲಬೇಕು. ಹನುಮಾನ್ ಜಿ ಗ್ರೇಟ್ (ಆಂಜನೇಯ ಸ್ವಾಮಿ ಶ್ರೇಷ್ಠರು). ಪಿಚ್‌ನಲ್ಲಿ ಬಾಲ್ ಟರ್ನ್ ಆಗುತ್ತಿದ್ದರಿಂದ ನಾನು ಪ್ರತಿ ಎಸೆತದಲ್ಲೂ ವೇಗವನ್ನು ಬದಲಾಯಿಸಿದೆ, ಅದೇ ನನಗೆ ವಿಕೆಟ್ ತಂದುಕೊಟ್ಟಿತು" ಎಂದಿದ್ದಾರೆ. ಅಲ್ಲದೆ ಸ್ಮೃತಿ ಮತ್ತು ಹರ್ಮನ್‌ಪ್ರೀತ್ ಅವರ 91 ರನ್‌ಗಳ ಜೊತೆಯಾಟ ಪಂದ್ಯದ ದಿಕ್ಕನ್ನೇ ಬದಲಿಸಿತು ಎಂದು ಶ್ಲಾಘಿಸಿದರು.

ಭಾರತ ಹಾಗೂ ಪಾಕಿಸ್ತಾನ ನಡುವಿನ ಈ ರೋಮಾಂಚಕ ಪಂದ್ಯವನ್ನು ವೀಕ್ಷಿಸಲು ಬರೋಬ್ಬರಿ 18,814 ಪ್ರೇಕ್ಷಕರು ಮೈದಾನಕ್ಕೆ ಹರಿದುಬಂದಿದ್ದರು. ಮಹಿಳಾ ಟಿ20 ವಿಶ್ವಕಪ್‌ನ ಗ್ರೂಪ್ ಹಂತದ ಪಂದ್ಯವೊಂದರಲ್ಲಿ ದಾಖಲಾದ ಅತಿ ಹೆಚ್ಚಿನ ಪ್ರೇಕ್ಷಕರ ಸಂಖ್ಯೆ ಇದಾಗಿದೆ.

Edited By : Nagaraj Tulugeri
PublicNext

PublicNext

15/06/2026 06:39 pm

Cinque Terre

8.3 K

Cinque Terre

0

ಸಂಬಂಧಿತ ಸುದ್ದಿ