ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೋಷಕರ ನಿರ್ಲಕ್ಷ್ಯ: ರಸ್ತೆಗೆ ಬಂದ ಕಂದಮ್ಮ, ಸಮಯಪ್ರಜ್ಞೆ ಮೆರೆದ ಬಸ್ ಚಾಲಕ-ಕಂಡಕ್ಟರ್

ಕೇರಳ : ರಸ್ತೆಯಲ್ಲಿ ತೆವಳುತ್ತಿದ್ದ ಪುಟ್ಟ ಮಗುವನ್ನು ಖಾಸಗಿ ಬಸ್ ಚಾಲಕ ಹಾಗೂ ಕಂಡಕ್ಟರ್ ಸಮಯಪ್ರಜ್ಞೆಯಿಂದ ರಕ್ಷಿಸಿದ್ದಾರೆ. ಕೂದಲೆಳೆ ಅಂತರದಲ್ಲಿ ಬಾಲಕಿ ಭೀಕರ ಅಪಘಾತದಿಂದ ಪಾರಾಗಿದ್ದು, ಬಸ್ ಸಿಬ್ಬಂದಿಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಹೌದು ಮಲಪ್ಪುರಂ ಜಿಲ್ಲೆಯ ಕೊಂಡೋಟ್ಟಿ ರಸ್ತೆಯಲ್ಲಿ ನಡೆದ ಈ ಅದ್ಭುತ ರಕ್ಷಣಾ ಕಾರ್ಯಾಚರಣೆ, ಪೋಷಕರ ಅತಿರೇಕದ ಬೇಜವಾಬ್ದಾರಿತನದಿಂದಾಗಿ ಹೆದ್ದಾರಿಗೆ ತೆವಳಿಕೊಂಡು ಬಂದ ಪುಟ್ಟ ಹೆಣ್ಣು ಮಗುವಿನ ಜೀವ ಉಳಿಸಿದೆ. ಚಾಲಕನ ಅತ್ಯದ್ಭುತ ಸಮಯಪ್ರಜ್ಞೆ ಮತ್ತು ಕಂಡಕ್ಟರ್‌ನ ಮಿಂಚಿನ ಸಾಹಸದಿಂದಾಗಿ ಮಗು ಅಪಾಯದಿಂದ ಪಾರಾಗಿದೆ. ಇಡೀ ಘಟನೆಯ ದೃಶ್ಯ ಬಸ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಸ್ ಸಿಬ್ಬಂದಿಗೆ ಜಯಕಾರ ಹಾಕುತ್ತಿದ್ದಾರೆ.

ಕೇರಳ ಮೋಟಾರ್ ವಾಹನ ಇಲಾಖೆ ಮತ್ತು ಸಾರಿಗೆ ಸಚಿವರು ಜಂಟಿಯಾಗಿ ಈ ಘಟನೆಯನ್ನು ಪ್ರಶಂಸಿಸಿದ್ದು, "ಡ್ರೈವಿಂಗ್ ಮಾಡುವಾಗ ಯಾವಾಗಲೂ 'ನಿರೀಕ್ಷಿಸದ ಘಟನೆಯನ್ನು ನಿರೀಕ್ಷಿಸಿ' (Expect the unexpected) ಎಂಬ ಮೈಂಡ್‌ಸೆಟ್ ಇರಬೇಕು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಯಾವುದೇ ಅಪಘಾತಕ್ಕೆ ಆಸ್ಪದ ನೀಡದೆ ಮಗುವನ್ನು ರಕ್ಷಿಸಿದ ಬಸ್ ಸಿಬ್ಬಂದಿಗೆ ನಮ್ಮ ಸಲಾಂ" ಎಂದು ಹೇಳಿದ್ದಾರೆ.

ಬೆಳಗ್ಗಿನ ಜಾವ, ಕೊಂಡೋಟ್ಟಿಯ ಕಿನಾರುಪಡಿ ಬಳಿಯ ರಸ್ತೆಬದಿಯ ಮನೆಯೊಂದರಲ್ಲಿ ಪೋಷಕರು ತಮ್ಮ ಜಗಲಿಯಲ್ಲಿ ಕೂತು ಪತ್ರಿಕೆ ಓದುವುದರಲ್ಲಿ ಮಗ್ನರಾಗಿದ್ದರು. ಈ ವೇಳೆ, ಮನೆಯ ಗೇಟ್ ತೆರೆದಿದ್ದುದರಿಂದ, ಒಂದು ವರ್ಷದ ಪುಟ್ಟ ಮಗು ತನಗೆ ಅರಿವಿಲ್ಲದೆಯೇ ತೆವಳುತ್ತಾ ರಸ್ತೆ ಮಧ್ಯಕ್ಕೆ ಬಂದಿದೆ. ಮಳೆ ಬಂದು ರಸ್ತೆ ಒದ್ದೆಯಾಗಿದ್ದರೂ, ವಾಹನಗಳು ವೇಗವಾಗಿ ಸಂಚರಿಸುವ ಕಡಿದಾದ ತಿರುವಿನಲ್ಲೇ ಆ ಕಂದಮ್ಮ ಕುಳಿತುಕೊಂಡಿತ್ತು.

ಅದೇ ಸಮಯದಲ್ಲಿ, ಪುಳಿಕಲ್ ಕಡೆಯಿಂದ ಫೆರೋಕ್ ಕಡೆಗೆ 'ಸಫಾ ಮರ್ವಾ' ಎಂಬ ಖಾಸಗಿ ಬಸ್ ವೇಗವಾಗಿ ಆಗಮಿಸುತ್ತಿತ್ತು. ಅಪಾಯಕಾರಿ ತಿರುವಿನಲ್ಲಿ ಜಿಟಿಜಿಟಿ ಮಳೆಯಿಂದಾಗಿ ದೃಷ್ಟಿ ಸಾಮರ್ಥ್ಯವೂ ಕಡಿಮೆಯಿತ್ತು. ಆದರೆ, ಬಸ್ ಚಾಲಕ ರಾಮಚಂದ್ರನ್ ಅವರಿಗೆ ರಸ್ತೆ ಮಧ್ಯದಲ್ಲಿ ಏನೋ ಒಂದು ಸಣ್ಣ ವಸ್ತು ಇರುವುದು ತಕ್ಷಣ ಗೋಚರಿಸಿದೆ. ಅದು ಮಗು ಎಂದು ಅರಿವಾಗುತ್ತಿದ್ದಂತೆಯೇ ಧೃತಿಗೆಡದ ಅವರು, ಹಿಂದೆ ಬರುತ್ತಿದ್ದ ವಾಹನಗಳಿಗೂ ಅಪಾಯವಾಗದಂತೆ ಅತ್ಯಂತ ಜಾಣ್ಮೆಯಿಂದ ಬಸ್‌ಗೆ ಸಡನ್ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಬಸ್ ನಿಲ್ಲುತ್ತಿದ್ದಂತೆಯೇ, ಸೆಕೆಂಡುಗಳೂ ವ್ಯರ್ಥ ಮಾಡದ ಕಂಡಕ್ಟರ್ ನವಾಸ್ ಅಲಿ, ಕೂಡಲೇ ಬಸ್‌ನಿಂದ ಕೆಳಕ್ಕೆ ಜಿಗಿದು ರಸ್ತೆ ಮಧ್ಯದಲ್ಲಿದ್ದ ಮಗುವನ್ನು ಎತ್ತಿ ಸುರಕ್ಷಿತವಾಗಿ ಪಕ್ಕಕ್ಕೆ ಕರೆತಂದಿದ್ದಾರೆ. ಈ ರೋಮಾಂಚಕ ಕ್ಷಣಗಳನ್ನು ಉಸಿರು ಬಿಗಿಹಿಡಿದು ನೋಡುತ್ತಿದ್ದ ಪ್ರಯಾಣಿಕರು, ಮಗು ಸುರಕ್ಷಿತವಾಗಿ ಕಂಡಕ್ಟರ್ ಕೈ ಸೇರುತ್ತಿದ್ದಂತೆ ನಿಟ್ಟುಸಿರು ಬಿಟ್ಟರು.

ಕಂಡಕ್ಟರ್ ಮಗುವನ್ನು ಎತ್ತಿಕೊಂಡು ಹೋದಾಗಲೇ ಪೋಷಕರಿಗೆ ತಮ್ಮ ಮಗು ಕಾಣೆಯಾಗಿ ಹೆದ್ದಾರಿ ಸೇರಿದ್ದ ವಿಷಯ ತಿಳಿದಿದೆ. ಸದ್ಯ ಮಗುವನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಲಾಗಿದೆಯಾದರೂ, ಸಾಮಾಜಿಕ ಜಾಲತಾಣಗಳಲ್ಲಿ ಪೋಷಕರ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ, ಮಲಪ್ಪುರಂ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಕೇರಳ ಸರ್ಕಾರ, ಚಾಲಕ ರಾಮಚಂದ್ರನ್ ಹಾಗೂ ಕಂಡಕ್ಟರ್ ನವಾಸ್ ಅವರ ಮಾನವೀಯ ಮತ್ತು ಸಮಯೋಚಿತ ಕಾರ್ಯವನ್ನು ಶ್ಲಾಘಿಸಿ ಅಧಿಕೃತವಾಗಿ ಗೌರವಿಸಿದೆ.

Edited By : Nirmala Aralikatti
PublicNext

PublicNext

12/06/2026 08:54 am

Cinque Terre

42.48 K

Cinque Terre

3

ಸಂಬಂಧಿತ ಸುದ್ದಿ