ಬೆಂಗಳೂರು: ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ (MLC) ನಸೀರ್ ಅಹ್ಮದ್ ಅವರಿಗೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (NCLT) ಭಾರಿ ಆಘಾತ ನೀಡಿದೆ. ಬರೋಬ್ಬರಿ ₹1,454 ಕೋಟಿ ಸಾಲ ಮರುಪಾವತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಸೀರ್ ಅಹ್ಮದ್ ಅವರನ್ನು ಬೆಂಗಳೂರು ಎನ್‌ಸಿಎಲ್‌ಟಿ ಪೀಠವು 'ಆರ್ಥಿಕ ದಿವಾಳಿ' (Bankrupt) ಎಂದು ಅಧಿಕೃತವಾಗಿ ಘೋಷಿಸಿದೆ.
ಕೇವಲ ನಸೀರ್ ಅಹ್ಮದ್ ಮಾತ್ರವಲ್ಲದೆ, ಅವರ ಪತ್ನಿ ನುಝತ್ ಆಯಿಷಾ ನಸೀರ್ ಮತ್ತು ಪುತ್ರ ಅವೈಜ್ ಅಹ್ಮದ್ ಅವರನ್ನೂ ನ್ಯಾಯಮಂಡಳಿ ದಿವಾಳಿ ಎಂದು ಘೋಷಿಸಿದೆ. ಈ ಆದೇಶದಿಂದಾಗಿ ನಸೀರ್ ಅಹ್ಮದ್ ಅವರು ತಮ್ಮ ವಿಧಾನ ಪರಿಷತ್ ಸದಸ್ಯತ್ವವನ್ನೇ ಕಳೆದುಕೊಳ್ಳುವ (ಅನರ್ಹತೆ) ಭೀತಿ ಎದುರಾಗಿದೆ.
ಪ್ರಕರಣದ ಹಿನ್ನೆಲೆ ಏನು?
ನಸೀರ್ ಅಹ್ಮದ್ ಅವರು ವ್ಯವಸ್ಥಾಪಕ ನಿರ್ದೇಶಕರಾಗಿದ್ದ 'ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್' (M/s Scotts Garments Limited) ಕಂಪನಿಗೆ ಎಸ್‌ಬಿಐ, ಕೆನರಾ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್‌ಗಳ ಒಕ್ಕೂಟವು ಭಾರಿ ಪ್ರಮಾಣದ ಸಾಲ ಸೌಲಭ್ಯ ಒದಗಿಸಿತ್ತು. ಈ ಸಾಲಕ್ಕೆ ನಸೀರ್ ಅಹ್ಮದ್, ಅವರ ಪತ್ನಿ ಹಾಗೂ ಪುತ್ರ ವೈಯಕ್ತಿಕ ಖಾತರಿದಾರರಾಗಿ (Personal Guarantors) ಸಹಿ ಹಾಕಿದ್ದರು. ಆದರೆ, 2018 ರಲ್ಲಿ ಕಂಪನಿಯ ಸಾಲದ ಖಾತೆಯು ಅನುತ್ಪಾದಕ ಆಸ್ತಿ (NPA) ಎಂದು ವರ್ಗೀಕರಿಸಲ್ಪಟ್ಟಿತು. ತದನಂತರ ಬ್ಯಾಂಕುಗಳು ಸಾಲ ವಸೂಲಾತಿ ಪ್ರಕ್ರಿಯೆ ಆರಂಭಿಸಿದ್ದವು.
ಎನ್‌ಸಿಎಲ್‌ಟಿ ಆದೇಶಕ್ಕೆ ಕಾರಣವೇನು?
ಮರುಪಾವತಿ ಯೋಜನೆ ಇಲ್ಲ: 2022 ರಲ್ಲೇ ಇವರ ವಿರುದ್ಧ ದಿವಾಳಿತನ ಪ್ರಕ್ರಿಯೆ ಆರಂಭವಾಗಿತ್ತು. ಬಾಕಿ ಮೊತ್ತ ಪಾವತಿಗೆ ಎನ್‌ಸಿಎಲ್‌ಟಿ ಸಾಕಷ್ಟು ಅವಕಾಶ ನೀಡಿದ್ದರೂ, ನಸೀರ್ ಅಹ್ಮದ್ ಕಡೆಯಿಂದ ಯಾವುದೇ ಸ್ಪಷ್ಟ ಮರುಪಾವತಿ ಯೋಜನೆ (Repayment Plan) ಸಲ್ಲಿಕೆಯಾಗಿರಲಿಲ್ಲ. ಇದನ್ನು ಬ್ಯಾಂಕುಗಳು 'ಶೂನ್ಯ ಮೌಲ್ಯದ ಯೋಜನೆ' ಎಂದು ಪರಿಗಣಿಸಿ, ದಿವಾಳಿತನ ಘೋಷಣೆಗೆ ಮನವಿ ಮಾಡಿದ್ದವು.
ಆಸ್ತಿ ಮುಟ್ಟುಗೋಲು ಪ್ರಕ್ರಿಯೆ
ಎನ್‌ಸಿಎಲ್‌ಟಿಯ ನ್ಯಾಯಾಂಗ ಸದಸ್ಯ ಸುನಿಲ್ ಕುಮಾರ್ ಅಗರ್ವಾಲ್ ಹಾಗೂ ತಾಂತ್ರಿಕ ಸದಸ್ಯ ರಾಧಾಕೃಷ್ಣ ಶ್ರೀಪಾದ ಅವರಿದ್ದ ಪೀಠವು ರವೀಂದ್ರ ಬೆಲೆಯೂರ್ ಅವರನ್ನು 'ಬ್ಯಾಂಕ್ರಪ್ಟ್ಸಿ ಟ್ರಸ್ಟಿ' (Bankruptcy Trustee) ಆಗಿ ನೇಮಿಸಿದೆ. ಇನ್ನು ಮುಂದೆ ನಸೀರ್ ಅಹ್ಮದ್ ಹಾಗೂ ಕುಟುಂಬದ ಆಸ್ತಿಗಳು ಈ ಟ್ರಸ್ಟಿ ಅಧೀನಕ್ಕೆ ಒಳಪಡಲಿದ್ದು, ಬ್ಯಾಂಕ್ ಸಾಲ ವಸೂಲಾತಿಗಾಗಿ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ.
ಎಂಎಲ್‌ಸಿ ಸ್ಥಾನಕ್ಕೆ ಸಂಕಷ್ಟ ಏಕೆ?
ಭಾರತೀಯ ಸಂವಿಧಾನದ ವಿಧಿ 191(1)(ಸಿ) ಹಾಗೂ ಐಬಿಸಿ (IBC) ಕಾಯ್ದೆಯ ಸೆಕ್ಷನ್ 140 ರ ಪ್ರಕಾರ, ಯಾವುದೇ ಜನಪ್ರತಿನಿಧಿ (ಶಾಸಕ ಅಥವಾ ಸಂಸದ) 'ದಿವಾಳಿ' (Undischarged Insolvent) ಎಂದು ಘೋಷಿಸಲ್ಪಟ್ಟರೆ ಅವರು ಸಾರ್ವಜನಿಕ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಲ್ಲ. ಹೀಗಾಗಿ ನಸೀರ್ ಅಹ್ಮದ್ ಅವರ ಎಂಎಲ್‌ಸಿ ಸ್ಥಾನದ ಮೇಲೆ ತೂಗುಗತ್ತಿ ನೇತಾಡುತ್ತಿದೆ.
ದಿವಾಳಿ ಘೋಷಣೆಯಾಗಿರುವುದರಿಂದ ನಸೀರ್ ಅಹ್ಮದ್ ಯಾವುದೇ ಕಂಪನಿಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುವಂತಿಲ್ಲ, ಹೊಸದಾಗಿ ಸಾಲ ಪಡೆಯುವಂತಿಲ್ಲ ಮತ್ತು ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡುವಂತೆಯೂ ಇಲ್ಲ.
PublicNext
12/06/2026 10:51 pm