ಉಡುಪಿ: ಮುಂಗಾರು ಆರಂಭವಾಗಿ 12 ದಿನಗಳು ಕಳೆದರೂ ಕರಾವಳಿಯಲ್ಲಿ ಮಾತ್ರ ಮಳೆಯ ಕಣ್ಣಾಮುಚ್ಚಾಲೆ ಮುಂದುವರಿದಿದೆ. ಹವಾಮಾನ ಇಲಾಖೆ ರೆಡ್ ಅಲರ್ಟ್, ಆರೆಂಜ್ ಅಲರ್ಟ್ ಘೋಷಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದು ರೈತರ ಚಿಂತೆಯನ್ನು ಹೆಚ್ಚಿಸಿದೆ. ಗದ್ದೆ ಹದಗೊಳಿಸಿ, ಬಿತ್ತನೆ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರಿನ ವಿಳಂಬ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ .
ಜೂನ್ ಮೊದಲ ವಾರದಲ್ಲೇ ಕರಾವಳಿಯಲ್ಲಿ ಮುಂಗಾರು ಚುರುಕುಗೊಳ್ಳಬೇಕಿತ್ತು. ಆದರೆ ಈ ಬಾರಿ ಮುಂಗಾರು ಬಲು ದುರ್ಬಲವಾಗಿ ಕಾಣಿಸಿಕೊಂಡಿದ್ದು, ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹವಾಮಾನ ಇಲಾಖೆ ನೀಡಿದ್ದ ರೆಡ್ ಅಲರ್ಟ್ ಹಾಗೂ ಆರೆಂಜ್ ಅಲರ್ಟ್ ಎಚ್ಚರಿಕೆಗಳ ನಡುವೆಯೂ ಉಡುಪಿ ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗಿಲ್ಲ.
ಜಿಲ್ಲೆಯಲ್ಲಿ ಸರಾಸರಿ 35.7 ಮಿಲಿಮೀಟರ್ ಮಳೆಯಷ್ಟೇ ದಾಖಲಾಗಿದೆ. ಹೆಬ್ರಿಯಲ್ಲಿ 50 ಮಿಲಿಮೀಟರ್, ಕುಂದಾಪುರದಲ್ಲಿ 43 ಮಿಲಿಮೀಟರ್, ಬೈಂದೂರಿನಲ್ಲಿ 38 ಮಿಲಿಮೀಟರ್ ಮಳೆಯಾಗಿದ್ದರೆ, ಉಡುಪಿ ಹಾಗೂ ಕಾರ್ಕಳದಲ್ಲಿ ತಲಾ 26 ಮಿಲಿಮೀಟರ್ ಮತ್ತು ಕಾಪುವಿನಲ್ಲಿ ಕೇವಲ 21 ಮಿಲಿಮೀಟರ್ ಮಳೆಯಾಗಿದೆ.ಹವಾಮಾನ ಇಲಾಖೆಯ ಮುನ್ಸೂಚನೆ ನಂಬಿ ಹಲವು ರೈತರು ಈಗಾಗಲೇ ಭತ್ತದ ಬಿತ್ತನೆ ಕಾರ್ಯ ಆರಂಭಿಸಿದ್ದರು. ಆದರೆ ಸಮರ್ಪಕ ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೀಜಗಳು ಒಣಗಿ ಹಾಳಾಗುತ್ತಿವೆ. ಇದರಿಂದ ರೈತರಿಗೆ ಹೆಚ್ಚುವರಿ ವೆಚ್ಚದ ಜೊತೆಗೆ ಆರ್ಥಿಕ ನಷ್ಟವೂ ಎದುರಾಗಿದೆ.
ಕಳೆದ ವರ್ಷ ಅವಧಿಗೂ ಮುನ್ನ ಆರಂಭವಾಗಿದ್ದ ಮುಂಗಾರು ಅತಿವೃಷ್ಟಿಗೆ ಕಾರಣವಾಗಿ ಬೆಳೆ ಹಾನಿ ಉಂಟುಮಾಡಿತ್ತು. ಈ ಬಾರಿ ಉತ್ತಮ ಮುಂಗಾರು ನಿರೀಕ್ಷಿಸಿದ್ದ ರೈತರಿಗೆ ವಿಳಂಬ ಮಳೆ ಹೊಸ ಸಂಕಷ್ಟ ತಂದೊಡ್ಡಿದೆ.
Kshetra Samachara
13/06/2026 12:20 pm
LOADING...