ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕ್ಷೀಣವಾದ ಮುಂಗಾರು; ಆತಂಕದಲ್ಲಿ ಮೀನುಗಾರರು

ಮಂಗಳೂರು: ಕರಾವಳಿಗೆ ಮುಂಗಾರು ಅಧಿಕೃತವಾಗಿ ಪ್ರವೇಶವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿದಿಲ್ಲ‌. ಆರಂಭದಲ್ಲೇ ಮುಂಗಾರು ಕ್ಷೀಣಗೊಂಡಿದೆ. ಪರಿಣಾಮ ಮಳೆಗಾಲದ ನಾಡದೋಣಿ ಮೀನುಗಾರಿಕೆ ವಿಳಂಬವಾಗುವ ಲಕ್ಷಣ ಕಂಡುಬಂದಿವೆ. ಪರಿಣಾಮ ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ.

ಜೂನ್ ತಿಂಗಳಿನಿಂದ ಎರಡು ತಿಂಗಳ ಕಾಲ ಆಳಸಮುದ್ರ ಮೀನುಗಾರಿಕೆಗೆ ನಿಷೇಧವಿದ್ದರೂ, ಮಳೆಗಾಲದ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ‌. ಆದರೆ, ನಾಡದೋಣಿ ಮೀನುಗಾರಿಕೆ ಸರಿಯಾಗಿ ನಡೆಯಬೇಕಾದರೆ ಭಾರೀ ಮಳೆ ಸುರಿದು ಸಮುದ್ರದಲ್ಲಿ ತೂಫಾನ್ ಸೃಷ್ಟಿಯಾಗಬೇಕು. ತೂಫಾನ್‌ನ ಆರ್ಭಟದಿಂದ ಅಲೆಗಳ ಹೊಯ್ದಾಟ ನಡೆದು ಸಮುದ್ರದೊಳಗಡೆ ಮಥನ ನಡೆಯುತ್ತದೆ‌. ಈ ಮಥನದಿಂದ ಮೀನುಗಳು ತೀರ ಪ್ರದೇಶದೆಡೆಗೆ ಬರುತ್ತವೆ. ಜೊತೆಗೆ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದು ಸಿಹಿನೀರು ಕಡಲು ಸೇರುತ್ತವೆ. ಈ ಸಿಹಿನೀರಿನ ಆಸೆಯಿಂದ ಮೀನುಗಳು ಸಮುದ್ರದಾಳದಿಂದ ತೀರ ಪ್ರದೇಶಕ್ಕೆ ಮುಖ ಮಾಡುತ್ತದೆ. ಇದರಿಂದ ತೀರ ಪ್ರದೇಶಗಳಲ್ಲೇ ಮೀನುಗಾರಿಕೆ ನಡೆಸುವ ನಾಡದೋಣಿ ಮೀನುಗಾರರಿಗೆ ಯಥೇಚ್ಛ ಮೀನುಗಳು ಸಿಗುತ್ತವೆ.

ಆದರೆ, ಈ ಬಾರಿ ಮುಂಗಾರು ಮಳೆ ಸರಿಯಾದ ಪ್ರಮಾಣದಲ್ಲಿ ಸುರಿಯದೆ ಸಮುದ್ರದಲ್ಲಿ ತೂಫಾನ್ ಅಲೆಗಳು ಸೃಷ್ಟಿಯಾಗಲು ಇನ್ನೂ ಎರಡು ವಾರಗಳ ಕಾಲ ಬೇಕಾಗಬಹುದು. ಹೀಗಾಗಿ ಮೀನುಗಾರಿಕೆ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳಲು ಮತ್ತಷ್ಟು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಮೀನುಗಾರರ ಅಭಿಪ್ರಾಯ.

ಮಳೆಗಾಲದ ನಾಡದೋಣಿ ಮೀನುಗಾರಿಕೆಗೆ ಮಂಗಳೂರಿನ ಸಸಿಹಿತ್ಲುವಿನಿಂದ ಉಳ್ಳಾಲದವರೆಗೆ ಸುಮಾರು 250 ನಾಡದೋಣಿಗಳು ಸಜ್ಜಾಗುತ್ತಿವೆ. ಸುಮಾರು 1,400 ಮಂದಿ ಮೀನುಗಾರರಿಗೆ ನವ ಮಂಗಳೂರು ಬಂದರು (ಎನ್ಎಂಪಿಎ) ಮೂಲಕ ಸಮುದ್ರ ಪ್ರವೇಶಿಸಲು ಗೇಟ್ ಪಾಸ್ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ವರ್ಷವೂ ಮಳೆಗಾಲದ ನಾಡದೋಣಿ ಮೀನುಗಾರಿಕೆ ಎನ್‌ಎಂಪಿಎ ಮೂಲಕವೇ ನಡೆಯಲಿದೆ. ಆದರೆ, ವಾಡಿಕೆಯ ಮಳೆ ಸುರಿಯದ ಪರಿಣಾಮ ಆದಾಯದ ನಿರೀಕ್ಷೆಯಲ್ಲಿದ್ದ ಮೀನುಗಾರರು ಕಂಗಾಲಾಗಿದ್ದಾರೆ. ಆದ್ದರಿಂದ ಅಲೆಗಳೊಂದಿಗೆ ಹೋರಾಟ ನಡೆಸಿ ಪಡುಬಿದ್ರೆವರೆಗೆ ಹೋಗಿ ಮೀನುಗಾರಿಕೆ ನಡೆಸುವ ಅನಿವಾರ್ಯತೆ ಎದುರಾಗಿದೆ.

ಒಟ್ಟಿನಲ್ಲಿ ಇನ್ನಾದರೂ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿಯಲಿ. ಈ ಮೂಲಕ ತಮ್ಮ ತುತ್ತಿನ ಚೀಲ ತುಂಬಲಿ ಎಂದು ಮೀನುಗಾರರು ನಿರೀಕ್ಷಿಸುತ್ತಿದ್ದಾರೆ‌.

Edited By :
PublicNext

PublicNext

11/06/2026 07:06 pm

Cinque Terre

17.94 K

Cinque Terre

0

ಸಂಬಂಧಿತ ಸುದ್ದಿ