ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾನಗಲ್: ಆಸ್ಪತ್ರೆ ಚಿತ್ರೀಕರಣ ವಿವಾದ: 'ದಮ್ಮಿದ್ದರೆ ನನ್ನ ಮೇಲೆ ಕೇಸ್ ಹಾಕಿ!' ಶಾಸಕರಿಗೆ ಯುವ ನಾಯಕನ ಸವಾಲು

ಹಾನಗಲ್: ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ಆಸ್ಪತ್ರೆಯಲ್ಲಿ ಯಾವುದೇ ಅನುಮತಿ ಇಲ್ಲದೆ ಚಿತ್ರೀಕರಣ ಮಾಡಲಾಗಿದೆ ಎಂದು ವೈದ್ಯ ಡಾ. ಮಧು ಆರ್. ಅವರು ನೀಡಿದ ದೂರಿನನ್ವಯ 'ನಮ್ಮೂರು ನಮ್ಮವರ' ಚಿತ್ರತಂಡದ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಆದರೆ, ಯೂಟ್ಯೂಬ್‌ನಲ್ಲಿ ಕಿರುಚಿತ್ರ ಅಪ್‌ಲೋಡ್ ಆಗುತ್ತಿದ್ದಂತೆ ಎಫ್‌ಐಆರ್ ದಾಖಲಿಸಿರುವುದರ ಹಿಂದೆ, ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅವರ ಕುಮ್ಮಕ್ಕಿದೆ ಎಂದು ಯುವ ನಾಯಕ ಸಂದೀಪ್ ಪಾಟೀಲ್ ತೀವ್ರ ಆರೋಪ ಮಾಡಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂದೀಪ್ ಪಾಟೀಲ್, ಜನಜಾಗೃತಿ ಮೂಡಿಸುವ ಉದ್ದೇಶದಿಂದ ಹಾನಗಲ್ ಸರ್ಕಾರಿ ಆಸ್ಪತ್ರೆಯ ಒಳಾಂಗಣದಲ್ಲಿ ಕಿರುಚಿತ್ರದ ಚಿತ್ರೀಕರಣ ಮಾಡಲಾಗಿತ್ತು ಎಂದರು.

ಚಿತ್ರೀಕರಣದ ಸಂಪೂರ್ಣ ಜವಾಬ್ದಾರಿ ಹೊತ್ತವರ ಮೇಲೆ ಎಫ್‌ಐಆರ್ ದಾಖಲಿಸುವ ಬದಲು, ಕಿರುಚಿತ್ರದಲ್ಲಿ ನಟಿಸಿದ ಕಾಲೇಜು ವಿದ್ಯಾರ್ಥಿನಿಗೆ ಪೊಲೀಸರು ಆಕೆಯ ಕಾಲೇಜಿಗೆ ತೆರಳಿ ನೋಟಿಸ್ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

"ನಮ್ಮೂರು ನಮ್ಮವರ ಚಿತ್ರದ ಪೂರ್ಣ ಜವಾಬ್ದಾರಿ ನನ್ನದು. ಇದಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ದಾಖಲು ಅಥವಾ ವಿಚಾರಣೆ ಇದ್ದರೆ ಅದು ಮೊದಲು ನನ್ನ ಮೇಲೆ ಆಗಬೇಕು" ಎಂದು ಸಂದೀಪ್ ಪಾಟೀಲ್ ಸ್ಪಷ್ಟಪಡಿಸಿದರು. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿತ್ರೀಕರಣ ಮಾಡಿರುವುದರಲ್ಲಿ ತಪ್ಪೇನಿದೆ? ಅದು ಸಾರ್ವಜನಿಕ ಆಸ್ತಿ. ಚಿತ್ರೀಕರಣ ಮಾಡಲಾಗಿದೆಯೇ ಹೊರತು ದರೋಡೆ, ಕಳ್ಳತನ ಏನನ್ನೂ ಮಾಡಿಲ್ಲ ಎಂದು ಪ್ರತಿಪಾದಿಸಿದರು.

ಹಾನಗಲ್ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರಿಲ್ಲ, ಔಷಧಿ ಇಲ್ಲ, ಇತ್ತೀಚೆಗೆ ಬೆಂಕಿ ಹತ್ತಿ ಕರಕಲಾದ ಆಸ್ಪತ್ರೆ ಕೊಠಡಿ ದುರಸ್ತಿ ಮಾಡಲಾಗುತ್ತಿಲ್ಲ. ಇವೆಲ್ಲವನ್ನೂ ಬಿಟ್ಟು ಯಾರದ್ದೋ ಮೇಲೆ ಎಫ್‌ಐಆರ್ ದಾಖಲಿಸಲು ಆಸ್ಪತ್ರೆ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಅವರು ಆಕ್ಷೇಪಿಸಿದರು. "ಧಮ್ ಇದ್ದರೆ ನನ್ನ ಮೇಲೆ ಪ್ರಕರಣ ದಾಖಲಿಸಿ" ಎಂದು ಹಾನಗಲ್ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

'ನಮ್ಮೂರು ನಮ್ಮವರ' ಸಂಘಟನೆಯ ಹೋರಾಟವನ್ನು ಎಫ್‌ಐಆರ್ ತಂತ್ರ ಬಳಸಿ ಹತ್ತಿಕ್ಕಲು ಸಾಧ್ಯವಿಲ್ಲ. ಹಾನಗಲ್ ತಾಲೂಕಿನವರೇ ಶಾಸಕರಾಗಿದ್ದರೆ ಇಂತಹ ವಾತಾವರಣ ಇರುತ್ತಿರಲಿಲ್ಲ. ಇವರನ್ನು ಮಂತ್ರಿಯನ್ನಾಗಿ ಮಾಡಿದರೆ ಇಡೀ ಹಾವೇರಿ ಜಿಲ್ಲೆಗೆ ಎಂತಹ ಆಘಾತಕಾರಿ ವಾತಾವರಣ ತಂದಿಡಬಹುದು? ಹಾಗಾಗಿ ಇವರನ್ನು ಮಂತ್ರಿಯನ್ನಾಗಿ ಮಾಡಬಾರದು. ಅತಿ ಶೀಘ್ರದಲ್ಲಿ ತಾಲೂಕು ಮತ್ತು ಜಿಲ್ಲೆಯಿಂದಲೇ ಇವರನ್ನು ಬೀಳ್ಕೊಡುತ್ತೇವೆ ಎಂದು ಸಂದೀಪ್ ಪಾಟೀಲ್ ಎಚ್ಚರಿಕೆ ನೀಡಿದರು.

ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್, ಹಾನಗಲ್

Edited By : Somashekar
PublicNext

PublicNext

13/06/2026 12:31 pm

Cinque Terre

7.54 K

Cinque Terre

0

ಸಂಬಂಧಿತ ಸುದ್ದಿ