ಸಿದ್ದಾಪುರ; ವಿದ್ಯಾರ್ಥಿಗಳಿಗೆ ನೀಡಿರುವ ಟ್ಯಾಬ್‌ಗಳಲ್ಲಿ ಪ್ರಾಥಮಿಕ ಕಲಿಕೆಯಿಂದ ಹಿಡಿದು ಸಕಲ ವಿಷಯಗಳೂ ಲಭ್ಯವಾಗುತ್ತವೆ. ಜಗತ್ತಿನ ಮಾಹಿತಿಗಳೆಲ್ಲವೂ ಇದರಲ್ಲಿದೆ ಎಂದರೆ ತಪ್ಪಾಗಲಾರದು. ಸಾಕಷ್ಟು ಉತ್ತಮ ಅಂಶಗಳು ಹಾಗೂ ಕೆಡಲು ಅಗತ್ಯವಾದವುಗಳೂ ಟ್ಯಾಬ್‌ಗಳಲ್ಲಿದ್ದು ವಿದ್ಯಾರ್ಥಿಗಳು ಉತ್ತಮ ಅಂಶಗಳನ್ನಷ್ಟೇ ಗ್ರಹಿಸಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ತೈಲ ಮತ್ತು ಅನಿಲ ನಿಗಮ (ಒಎನ್‌ಜಿಸಿ) ಸಿಎಸ್‌ಆರ್ ನಿಧಿಯಲ್ಲಿ ಜನಶ್ರೀ ಫೌಂಡೇಶನ್ ಸಹಕಾರದೊಂದಿಗೆ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಕಲ್ಪಿಸುವಂತಹ ಟ್ಯಾಬ್‌ಗಳನ್ನು ತಾಲೂಕಿನ ಶಿರಳಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡುತ್ತಿದ್ದರು.
ಈಗಾಗಲೇ ಜಿಲ್ಲೆಯ ವಿವಿಧ ಶಾಲೆಗಳಿಗೆ ತಲಾ 10 ಲಕ್ಷ ರೂ.ಗಳ ಮೌಲ್ಯದ ಸ್ಮಾರ್ಟ್ ಬೋರ್ಡ್‌ಗಳನ್ನು ವಿತರಿಸಲಾಗಿದೆ. ಇದೀಗ ತಾಲೂಕಿನ ಆರು ಪ್ರೌಢಶಾಲೆಗಳ ಆಯ್ದ ಕೆಲವು ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ವಿತರಿಸಿದ್ದೇವೆ. ಇಂತಹ ಆಧುನಿಕ ಪರಿಕರಗಳ ಬಳಕೆಯಿಂದ ಜ್ಞಾನ ಹೆಚ್ಚುವ ಜತೆಯಲ್ಲಿ ಕೌಶಲ್ಯ ವೃದ್ಧಿಯಾಗುತ್ತದೆ ಎಂದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆಯಂತೆ ಈ ಕಾರ್ಯ ಜಾರಿಗೆ ತರಲಾಗಿದೆ. ಜಗತ್ತಿನಲ್ಲಿ ಅತಿಹೆಚ್ಚು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡ ದೇಶ ಭಾರತವಾಗಿದೆ. ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿಯ ವಿದ್ಯಮಾನಗಳು, ಪರಿಸ್ಥಿತಿಗಳು ಗಂಭೀರತೆಯಿಂದ, ಸವಾಲಿನಿಂದ ಕೂಡಿವೆ. ಭಾರತಕ್ಕೆ ಇಂತಹ ಸಮಸ್ಯೆಗಳನ್ನು ಎದುರಿಸುವ ತಾಕತ್ತು ಇದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಕಾರಣ.
ಒಂದು ದಿವಸವೂ ರಜೆಯಿಲ್ಲದೆ, ಅನಾರೋಗ್ಯಕ್ಕೆ ಒಳಗಾಗದೆ, ಕೌಟುಂಬಿಕ ಜಂಜಾಟಗಳಿಲ್ಲದೆ ಅವರು ದೇಶಕ್ಕಾಗಿ ಅಹರ್ನಿಶಿ ಕರ್ತವ್ಯ ನಿರ್ವಹಿಸಿದ್ದಾರೆ. ಇಡೀ ಪ್ರಪಂಚವೇ ಮೆಚ್ಚಿಕೊಳ್ಳುವಂತಹ ಕಾರ್ಯವನ್ನು ಮಾಡಿದ್ದಾರೆ. ದೇಶದ ಏಕತೆ, ಅಖಂಡತೆಗೆ ಭಂಗಬಾರದಂತೆ ನಾವೆಲ್ಲರೂ ಪ್ರಾಮಾಣಿಕತೆಯಿಂದ ನಮ್ಮ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸೋಣ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ಪ್ರಾಸ್ತಾವಿಕ ಮಾತನಾಡಿ ಸಂಸದ ಕಾಗೇರಿಯವರು ಶಿರಸಿ ಶೈಕ್ಷಣಿಕ ಜಿಲ್ಲೆಯಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶಿಕ್ಷಣ ಮಂತ್ರಿಗಳಿದ್ದಾಗ "ಸ್ಪಷ್ಟ ಓದು- ಶುದ್ಧ ಬರಹ", ಕನ್ನಡ ಭಾಷೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ತೆಗೆದುಕೊಳ್ಳುವ ವಿಧಾನ, ಕನ್ನಡ ಸಹಿಯಂತಹ ಕಾರ್ಯ ಜಾರಿಗೆ ತಂದಿದ್ದಾರೆ. ಕೌನ್ಸಿಲಿಂಗ್, ವರ್ಗಾವಣೆಗಳಿಗೆ ತೊಂದರೆಯಾಗದಂತಹ ದಾರಿತೋರಿದ್ದಾರೆ ಎಂದರು.
ವೇದಿಕೆಯಲ್ಲಿ ವಿವಿಧ ಪ್ರೌಢಶಾಲೆಗಳ ಮುಖ್ಯಾಧ್ಯಾಪಕರು, ಎಸ್‌ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳು, ಪಿಡಿಒ ರಾಜೇಶ ನಾಯ್ಕ, ತಿಮ್ಮಪ್ಪ ಎಂ.ಕೆ., ಸಹಕಾರಿ ಶ್ರೀಕಾಂತ ಭಟ್ಟ ಕೊಳಗಿ ಇತರರು ಉಪಸ್ಥಿತರಿದ್ದರು. ಶಿರಳಗಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಆನಂದ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು.
ಶಿರಳಗಿ, ಜಿಡ್ಡಿ, ಹೊಸೂರು, ಬಿಳಗಿ, ಕಾನಸೂರ, ಹೆಗ್ಗರಣಿ ಪ್ರೌಢಶಾಲೆಗಳ ಗ್ರಾಮೀಣ ಭಾಗದ 24 ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸ್ಯಾಮ್‌ಸಂಗ್ ಕಂಪನಿಯ ಟ್ಯಾಬ್‌ಗಳನ್ನು ವಿತರಿಸಲಾಯಿತು. ಕು.ಅಮೃತಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಿರಳಗಿ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಪ್ರೇಮಲತಾ ರಾಯ್ಕರ್ ಸ್ವಾಗತಿಸಿದರು. ಶಿಕ್ಷಕಿ ಗೀತಾ ಬಿ.ಸಿ. ನಿರ್ವಹಿಸಿದರು.
Kshetra Samachara
13/06/2026 10:07 pm