ಹುಬ್ಬಳ್ಳಿ: ಶಾಲಾ ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಹುಬ್ಬಳ್ಳಿ ಟ್ರಾಫಿಕ್ ಪೊಲೀಸರು, ಶಾಲಾ ವಾಹನಗಳ ಚಾಲಕರ ತಪಾಸಣೆ ನಡೆಸಿದ್ದಾರೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುವ ಆಟೋ, ವ್ಯಾನ್ ಹಾಗೂ ಬಸ್‌ಗಳ ದಾಖಲೆಗಳನ್ನು ಪರಿಶೀಲಿಸಿ, ಚಾಲಕರನ್ನು ತಪಾಸಣೆ ಮಾಡುವ ಮೂಲಕ ಸುರಕ್ಷಿತ ಸಂಚಾರಕ್ಕೆ ಒತ್ತು ನೀಡಿದ್ದಾರೆ.
ಹೌದು... ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಹುಬ್ಬಳ್ಳಿಯ ಉತ್ತರ ಸಂಚಾರ ಟ್ರಾಫಿಕ್ ಪೊಲೀಸರು ವಿಶೇಷ ತಪಾಸಣೆ ನಡೆಸಿದರು. ಪ್ರತಿದಿನ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುವ ಆಟೋ, ವ್ಯಾನ್ ಹಾಗೂ ಬಸ್‌ಗಳನ್ನು ತಡೆದು ಚಾಲಕರ ದಾಖಲೆಗಳನ್ನು ಪರಿಶೀಲಿಸಿದರು. ಈ ವೇಳೆ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದಾರೆಯೇ ಎಂಬುದನ್ನು ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆಯ ಮೂಲಕ ಪರಿಶೀಲಿಸಲಾಯಿತು. ಜೊತೆಗೆ ಲೈಸೆನ್ಸ್, ವಾಹನದ ದಾಖಲೆಗಳು, ಇನ್ಶುರೆನ್ಸ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಕೂಡ ತಪಾಸಣೆ ಮಾಡಿದರು.
ಶಾಲಾ ವಾಹನಗಳಲ್ಲಿ ಪ್ರಯಾಣಿಸುವ ಮಕ್ಕಳ ಸುರಕ್ಷತೆ ಅತ್ಯಂತ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡದಂತೆ ಪೊಲೀಸರು ಎಚ್ಚರಿಕೆ ಸಂದೇಶ ನೀಡಿದರು. ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ತಲುಪಿಸುವ ಉದ್ದೇಶದಿಂದ ಟ್ರಾಫಿಕ್ ಪೊಲೀಸರು ಕೈಗೊಂಡಿರುವ ಈ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
14/06/2026 10:54 am
LOADING...