ಮಧ್ಯಪ್ರದೇಶ: ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಒಂದೇ ಒಂದು ವದಂತಿ ಮೂರು ಅಮಾಯಕ ಪ್ರಯಾಣಿಕರ ಭೀಕರ ಸಾವಿಗೆ ಕಾರಣವಾಗಿರುವ ಅತ್ಯಂತ ಆಘಾತಕಾರಿ ಘಟನೆ ಮಧ್ಯಪ್ರದೇಶದ ಮೊರೆನಾ ಬಳಿ ಸಂಭವಿಸಿದೆ. ಉದಯ್‌ಪುರ-ಖಜುರಾಹೊ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರು ಸುಳ್ಳು ಸುದ್ದಿಗೆ ಹೆದರಿ ಟ್ರ್ಯಾಕ್ ಮೇಲೆ ಇಳಿದಿದ್ದಾಗ, ಮತ್ತೊಂದು ಹಳಿಯಲ್ಲಿ ಬಂದ ರೈಲು ಇವರ ಮೇಲೆ ಹರಿದಿದೆ.
ವರದಿಗಳ ಪ್ರಕಾರ, ಉದಯ್‌ಪುರ-ಖಜುರಾಹೊ ಎಕ್ಸ್‌ಪ್ರೆಸ್ ರೈಲು ಹೆತಾಮ್‌ಪುರ ರೈಲ್ವೆ ನಿಲ್ದಾಣದ ಬಳಿ ಚಲಿಸುತ್ತಿದ್ದಾಗ, ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ದಟ್ಟವಾಗಿ ಹರಡಿದೆ. ಇದರಿಂದ ತೀವ್ರ ಆತಂಕಕ್ಕೊಳಗಾದ ಪ್ರಯಾಣಿಕರು ಜೀವಭಯದಿಂದ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಜಿಗಿದು, ಪಕ್ಕದಲ್ಲಿದ್ದ ಮತ್ತೊಂದು ರೈಲ್ವೆ ಹಳಿಯ ಮೇಲೆ ಓಡಲಾರಂಭಿಸಿದ್ದಾರೆ.
ದುರದೃಷ್ಟವಶಾತ್, ಅದೇ ಸಮಯದಲ್ಲಿ ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ಅತ್ಯಂತ ವೇಗವಾಗಿ ಬಂದಿದೆ. ಹಳಿಯ ಮೇಲೆ ಜನ ನಿಂತಿರುವುದನ್ನು ಗಮನಿಸದ ಆ ರೈಲು ಪ್ರಯಾಣಿಕರ ಮೇಲೆಯೇ ಹರಿದು ಹೋಗಿದೆ. ಈ ಭೀಕರ ಅಪಘಾತದಲ್ಲಿ ಮೂವರು ಪ್ರಯಾಣಿಕರು ಸ್ಥಳದಲ್ಲೇ ದೇಹ ಛಿದ್ರಗೊಂಡು ದುರ್ಮರಣಕ್ಕೀಡಾಗಿದ್ದಾರೆ.
ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದಾರೆ. ರೈಲಿನಲ್ಲಿ ಯಾವುದೇ ಬೆಂಕಿ ಕಾಣಿಸಿಕೊಂಡಿರಲಿಲ್ಲ, ಕೇವಲ ವದಂತಿಯಿಂದಲೇ ಈ ದೊಡ್ಡ ದುರಂತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
PublicNext
15/06/2026 05:22 pm
LOADING...