ಚಿತ್ರದುರ್ಗ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಚುನಾವಣೆಗಳೇ ಭದ್ರ ಬುನಾದಿ. ಇವು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ನಡೆದಾಗ ಮಾತ್ರ ಭವ್ಯ ಭಾರತದ ಕನಸು ನನಸಾಗಲು ಸಾಧ್ಯ ಎಂದು ಕ್ಯಾದಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮೀನಾಕ್ಷಮ್ಮ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 2026-27ನೇ ಸಾಲಿನ ಶಾಲಾ ಸಂಸತ್ತಿನ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಶಾಲೆಯ 1 ರಿಂದ 7ನೇ ತರಗತಿಯ ಒಟ್ಟು 101 ವಿದ್ಯಾರ್ಥಿಗಳು ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಭಾರತ ಚುನಾವಣಾ ಆಯೋಗದ ಮಾದರಿಯಲ್ಲೇ ನಡೆದ ಈ ಚುನಾವಣೆಯಲ್ಲಿ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ತೋರಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ಖಚಿತಪಡಿಸಿಕೊಂಡು ಸರದಿ ಸಾಲಿನಲ್ಲಿ ನಿಂತು ಮತದಾನ ಆರಂಭಿಸಿದರು. ಆಧುನಿಕ ಮೊಬೈಲ್ ಆ್ಯಪ್ ಆಧಾರಿತ ಇವಿಎಂ ತಂತ್ರಜ್ಞಾನದ ಮೂಲಕ ಬ್ಯಾಲೆಟ್ ನಮೂನೆಯಲ್ಲಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿದಂತೆ ವಿವಿಧ ಖಾತೆಗಳ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಯಿತು.
ಬೆಳಗ್ಗೆಯಿಂದ ಆರಂಭವಾದ ಮತದಾನವು ಮಧ್ಯಾಹ್ನ 12.30ಕ್ಕೆ ಮುಕ್ತಾಯಗೊಂಡಿತು. ಒಟ್ಟು 110 ಮತಗಳು ಚಲಾವಣೆಯಾಗಿದ್ದು, ಯಾವುದೇ ಮತಗಳು ತಿರಸ್ಕøತಗೊಳ್ಳದೆ ಪಾರದರ್ಶಕವಾಗಿ ಪ್ರಕ್ರಿಯೆ ಸಂಪೂರ್ಣಗೊಂಡಿತು. ಶಾಲಾ ಸಂಸತ್ತಿನ ಒಟ್ಟು 10 ಸ್ಥಾನಗಳಿಗಾಗಿ 20ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಜೂನ್ 10 ರಂದು ನಾಮಪತ್ರ ಸಲ್ಲಿಕೆ, 11 ರಂದು ಅಂತಿಮ ಕಣದ ಪಟ್ಟಿ ಪ್ರಕಟ ಹಾಗೂ 12 ರಂದು ಚುನಾವಣಾ ಪ್ರಚಾರ ಕಾರ್ಯಗಳು ನಿಯಮಾನುಸಾರ ನಡೆದಿದ್ದವು.
ಮೊಬೈಲ್ ಆ್ಯಪ್ ಆಧಾರಿತ ಮತ ಯಂತ್ರದ ನೆರವಿನಿಂದ ಮತದಾನ ಮುಗಿದ ತಕ್ಷಣವೇ ಫಲಿತಾಂಶ ಪ್ರಕಟಿಸಲಾಯಿತು. 7ನೇ ತರಗತಿಯ ವಿದ್ಯಾರ್ಥಿನಿ ದೀಕ್ಷಾ 41 ಮತಗಳನ್ನು ಪಡೆಯುವ ಮೂಲಕ ಶಾಲಾ ಸಂಸತ್ತಿನ ಮುಖ್ಯಮಂತ್ರಿಯಾಗಿ ಭರ್ಜರಿ ಜಯ ಸಾಧಿಸಿದರು. ಇನ್ನುಳಿದಂತೆ 20 ಮತಗಳನ್ನು ಪಡೆದ ಮನುಜ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ, ತಲಾ 15 ಮತಗಳನ್ನು ಪಡೆದ ಪೂರ್ವಿಕ ಕ್ರೀಡಾ ಮಂತ್ರಿಯಾಗಿ, ಕಿರಣ್ ಆರೋಗ್ಯ ಮಂತ್ರಿಯಾಗಿ ಮತ್ತು ಸಂಜಯ್ ರಕ್ಷಣಾ ಸಚಿವರಾಗಿ ಚುನಾಯಿತರಾದರು.
ನೂತನ ಕ್ಯಾಬಿನೆಟ್‍ಗೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಶುಭ ಕೋರಿ, ಶೈಕ್ಷಣಿಕ ವರ್ಷದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಕಿವಿಮಾತು ಹೇಳಿದರು. ವಿಜೇತ ವಿದ್ಯಾರ್ಥಿಗಳು ಗೆಲುವಿನ ಸಂಭ್ರಮಾಚರಣೆ ನಡೆಸಿದರು.
‘18 ವರ್ಷ ತುಂಬಿದ ಭಾರತದ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕಿರುತ್ತದೆ. ಮತದಾನದ ವಯೋಮಾನಕ್ಕೆ ಕಾಲಿಡುವ ಮಕ್ಕಳಿಗೆ ಪೂರ್ವಭಾವಿಯಾಗಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಪರಿಚಯ ಮಾಡಿಸುವುದು ಇಂದಿನ ಅಗತ್ಯ. ವಿದ್ಯಾರ್ಥಿಗಳಲ್ಲಿ ರಾಜಕೀಯ ಸ್ಥಿತಿಗತಿಗಳ ಅರಿವು ಮೂಡಿಸಲು ಮತ್ತು ಭವಿಷ್ಯದ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಲು ಇಂತಹ ಅಣಕು ಚುನಾವಣೆಗಳು ಮಹತ್ತರ ಪಾತ್ರ ವಹಿಸುತ್ತವೆ. ಶಾಲಾ ಹಂತದಲ್ಲೇ ಸಮಗ್ರ ಚುನಾವಣಾ ಪರಿಕಲ್ಪನೆ ನೀಡುವುದು ಎಲ್ಲ ಶಿಕ್ಷಕರ ಕರ್ತವ್ಯವಾಗಿದೆ’ ಎಂದು ಶಾಲಾ ಚುನಾವಣಾಧಿಕಾರಿ ಅಜಯ್ ಕುಮಾರ್ ಕೆ.ಜಿ. ಮಾಹಿತಿ ನೀಡಿದರು.
ಈ ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ಪಿ.ಆರ್.ಒ ಆಗಿ ಮುಖ್ಯ ಶಿಕ್ಷಕಿ ಮೀನಾಕ್ಷಮ್ಮ, ಎ.ಪಿ.ಆರ್.ಒ ಆಗಿ ಶಿಕ್ಷಕಿ ಸುಜಾತ ಹಾಗೂ ಫೋಲಿಂಗ್ ಆಫೀಸರ್ ಆಗಿ ಶಿಕ್ಷಕಿ ಕುಸುಮಾ ಅವರು ಕರ್ತವ್ಯ ನಿರ್ವಹಿಸಿದರು.
Kshetra Samachara
15/06/2026 06:11 pm