ನವದೆಹಲಿ: ದೇಶಾದ್ಯಂತ ಜೂನ್ 21 ರಂದು ನಡೆಯಲಿರುವ ನೀಟ್ (NEET-UG 2026) ಮರುಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಇತರೆ ಅಕ್ರಮಗಳನ್ನು ತಡೆಯಲು ಕೇಂದ್ರ ಸರ್ಕಾರ ಭಾರಿ ಮಹತ್ವದ ಕ್ರಮ ಕೈಗೊಂಡಿದೆ. ಭಾರತದಲ್ಲಿ ಜನಪ್ರಿಯ ಮೆಸೇಜಿಂಗ್ ಆ್ಯಪ್ ಆದ ಟೆಲಿಗ್ರಾಮ್ ಬಳಕೆಯ ಮೇಲೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮತ್ತು ಉನ್ನತ ಶಿಕ್ಷಣ ಇಲಾಖೆಯ ಶಿಫಾರಸಿನ ಮೇರೆಗೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಈ ಕಠಿಣ ಆದೇಶವನ್ನು ಹೊರಡಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ (IT Act) ಸೆಕ್ಷನ್ 69A ಅಡಿಯಲ್ಲಿ ಕೇಂದ್ರ ಸಚಿವಾಲಯವು ಈ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಅನ್ವಯ, ಜೂನ್ 22, 2026 ರವರೆಗೆ ಭಾರತದಲ್ಲಿ ಟೆಲಿಗ್ರಾಮ್ ಪ್ಲಾಟ್‌ಫಾರ್ಮ್ ಪ್ರವೇಶವನ್ನು ಸೀಮಿತಗೊಳಿಸಲಾಗಿದೆ. ಮರುಪರೀಕ್ಷೆ ಮುಗಿದು, ಅದರ ತಕ್ಷಣದ ಪ್ರಕ್ರಿಯೆಗಳು ಮುಕ್ತಾಯಗೊಳ್ಳುವವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ. ಕೇವಲ ಆ್ಯಪ್ ನಿರ್ಬಂಧಿಸುವುದು ಅಷ್ಟೇ ಅಲ್ಲದೆ, ಟೆಲಿಗ್ರಾಮ್‌ನ ಪ್ರಮುಖ ಫೀಚರ್ ಒಂದಕ್ಕೂ ಬ್ರೇಕ್ ಹಾಕಲಾಗಿದೆ.
ಈಗಾಗಲೇ ಪೋಸ್ಟ್ ಮಾಡಲಾದ ಹಳೆಯ ಸಂದೇಶಗಳನ್ನು ಎಡಿಟ್ ಮಾಡುವ (Message Editing Feature) ಅವಕಾಶವನ್ನು ಭಾರತದಲ್ಲಿ ಜೂನ್ 30, 2026 ರವರೆಗೆ ನಿಷ್ಕ್ರಿಯಗೊಳಿಸಲು ಟೆಲಿಗ್ರಾಮ್ ಸಂಸ್ಥೆಗೆ ಸೂಚಿಸಲಾಗಿದೆ. ರಾಷ್ಟ್ರೀಯ ಮಟ್ಟದ ಪರೀಕ್ಷೆಗಳು ಮುಗಿದ ನಂತರ, ವಂಚಕರ ಜಾಲಗಳು ಟೆಲಿಗ್ರಾಮ್‌ನ 'ಮೆಸೇಜ್ ಎಡಿಟ್' ಫೀಚರ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದವು. ಈ ರೀತಿಯ ವ್ಯವಸ್ಥಿತ ವಂಚನೆ ಮತ್ತು ಗೊಂದಲಗಳಿಗೆ ಕಡಿವಾಣ ಹಾಕಲು ಸರ್ಕಾರ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಡಿಜಿಟಲ್ ಸ್ಟ್ರೈಕ್ ನಡೆಸಿದೆ.
PublicNext
16/06/2026 01:01 pm