ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಶ್ಚಿಮಘಟ್ಟದ ತಪ್ಪಲಿನ ದಟ್ಟ ಅರಣ್ಯದ ಮಧ್ಯೆ ಇರುವ ಮಾಳ ಮಣ್ಣುಪಾಲು ಮನೆಯ ಪರಿಸರದಲ್ಲಿ ಮಾಹೆಯ ಬೆಂಗಳೂರಿನ ಸೃಷ್ಟಿ ಮಣಿಪಾಲ ಇನ್ಸ್ಟಿಟ್ಯೂಟ್(ಮಾಹೆ) ಇದರ ಅಧ್ಯಾಪಕ ಹಾಗೂ ಕಪ್ಪೆ ಸಂಶೋಧಕ ಡಾ.ಗುರುರಾಜ ಕೆ.ವಿ. ನೇತೃತ್ವದಲ್ಲಿ ಫ್ರಾಗ್ ವಾಕ್-2026 ನ್ನು ಹಮ್ಮಿಕೊಳ್ಳಲಾಗಿತ್ತು.
ಮೂರು ದಿನಗಳ ಕಾಲ ಪರಿಸರದ ಸುಮಾರು ಎರಡು ಕಿ.ಮೀ. ವ್ಯಾಪ್ತಿಯಲ್ಲಿ ನಡೆದ ಕ್ಷೇತ್ರ ಅಧ್ಯಯನ ಸಂದರ್ಭದಲ್ಲಿ ಈಗಾಗಲೇ ರಾಜ್ಯ ಕಪ್ಪೆ ಮಾನ್ಯತೆಗೆ ಶಿಫಾರಸ್ಸು ಆಗಿರುವ ವಿಶಿಷ್ಟ ಪ್ರಭೇದ ‘ಮಲಬಾರ್ ಟ್ರೀ ಟೋಡ್’ ಸೇರಿದಂತೆ ಒಟ್ಟು 11 ಪ್ರಭೇದಗಳು ಪತ್ತೆಯಾದವು. ಇದರಲ್ಲಿ ಸುಮಾರು 12 ಮಂದಿ ಅಧ್ಯಯನಕಾರರು, ವಿದ್ಯಾರ್ಥಿಗಳು, ಆಸಕ್ತರು ಪಾಲ್ಗೊಂಡಿದ್ದರು.
ಕಾರ್ಯಾಗಾರದಲ್ಲಿ ಉಭಯಚರಗಳ ಪರಿಚಯ, ಅವುಗಳ ವಿಶಿಷ್ಟ ಲಕ್ಷಣಗಳು, ಉಭಯಚರಗಳ ಜಾಗತಿಕ ವೈವಿಧ್ಯತೆ, ಭಾರತದಲ್ಲಿನ ವೈವಿಧ್ಯತೆ ಹಾಗೂ ಸಂರಕ್ಷಣಾ ಸಮಸ್ಯೆಗಳ ಕುರಿತು ಉಪನ್ಯಾಸ ಮತ್ತು ಕಪ್ಪೆಗಳ ಕೂಗು, ಅದನ್ನು ಗುರುತಿಸುವ ಬಗ್ಗೆ ಮತ್ತು ರೆಕಾರ್ಡಿಂಗ್ ಹಾಗೂ ಕ್ಷೇತ್ರದಲ್ಲಿ ಕಪ್ಪೆಗಳ ವೀಕ್ಷಣೆಯನ್ನು ನಡೆಸಲಾಯಿತು.
ಒಟ್ಟು ಮೂರು ದಿನಗಳ ಕಾಲ ನಡೆದ ಫ್ರಾಗ್ ವಾಕ್‌ನಲ್ಲಿ ಗೋಲ್ಡನ್ ಬ್ಯಾಕ್ಡ್ ಫ್ರಾಗ್, ಸ್ಮಾಲ್ ಕ್ರಿಕೆಟ್ ಫ್ರಾಗ್, ಇಂದಿರಾನ ಗುಂಡ್ಯ ಕಪ್ಪೆ, ಸ್ಕಿಟ್ಟೆರಿಂಗ್ ಫ್ರಾಗ್, ವಯನಾಡ್ ಬುಶ್ ಫ್ರಾಗ್, ಕಾಮನ್ ಟೋಡ್, ಮಲಬಾರ್ ಗ್ಲಿಡ್ಡಿಂಗ್ ಫ್ರಾಗ್, ಇಂಡಿಯನ್ ಬುಲ್ ಫ್ರಾಗ್, ಕೆಂಪುಹೊಳೆ ನೈಟ್ ಫ್ರಾಗ್, ಮಲಬಾರ್ ಟ್ರೀ ಟೋಡ್, ಓರಂಟೆ ನ್ಯಾರೋ ಮೌತೆಡ್ ಫ್ರಾಗ್ ಪ್ರಭೇದಗಳು ಪತ್ತೆಯಾದವು.
ಈ ಕಾರ್ಯಾಗಾರಕ್ಕೆ ಮಾಳ ಮಣ್ಣುಪಾಲು ಮನೆಯ ಪುರುಷೋತ್ತಮ ಅಡ್ವೆ ಹಾಗೂ ಮನು ಸಹಕರಿಸಿದರು.
PublicNext
16/06/2026 07:26 pm
LOADING...