ಬ್ರಹ್ಮಾವರ: ಕರಾವಳಿ ಜಿಲ್ಲೆಯಲ್ಲಿ ಮುಂಗಾರು ಮಳೆಯ ಲೆಕ್ಕಾಚಾರ ವರ್ಷದಿಂದ ವರ್ಷಕ್ಕೆ ವ್ಯತ್ಯಾಸವಾಗುತ್ತಿದ್ದು, ಈ ವರ್ಷ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಕಳೆದ ವರ್ಷ ಜೂನ್ ತಿಂಗಳಿನಲ್ಲಿ ನದಿ, ತೊರೆಗಳು ಹಾಗೂ ಹಳ್ಳಕೊಳ್ಳಗಳು ತುಂಬಿ ಹರಿದು, ಭತ್ತದ ಕೃಷಿಗೆ ಭೂಮಿ ಹದಗೊಳಿಸುವ ಚಟುವಟಿಕೆಗಳು ಭರದಿಂದ ಸಾಗಿದ್ದವು. ಆದರೆ, ಈ ವರ್ಷ ಪರಿಸ್ಥಿತಿ ತದ್ವಿರುದ್ಧವಾಗಿದ್ದು, ಸಕಾಲಕ್ಕೆ ಮಳೆ ಬಾರದೆ ಬಹುತೇಕ ಭತ್ತದ ಗದ್ದೆಗಳು ನೀರಿಲ್ಲದೆ ಒಣಗಿ ಬತ್ತಿರುವುದು ರೈತರನ್ನು ಕಂಗಾಲಾಗಿಸಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನದಿ ತೀರದ ಪ್ರದೇಶಗಳಾದ ಕೂರಾಡಿ, ಬಾರಕೂರು, ಉಪ್ಪೂರು, ಹಂದಾಡಿ ಮತ್ತು ನೀಲಾವರದಲ್ಲಿ ಈ ವೇಳೆಗೆ ನಾಟಿ ಕಾರ್ಯ ಆರಂಭಗೊಳ್ಳಬೇಕಿತ್ತು. ಆದರೆ, ಈ ವರ್ಷ ಮಳೆಯ ಕೊರತೆಯಿಂದಾಗಿ ಗದ್ದೆಗಳನ್ನು ಇನ್ನೂ ಉಳುಮೆ ಮಾಡಿಲ್ಲ. ಇದರಿಂದ ಭತ್ತದ ಗದ್ದೆಗಳು ಬಂಜರು ಭೂಮಿಯಂತೆ ಕಾಣುತ್ತಿವೆ.
ಯಾಂತ್ರಿಕ ಅಥವಾ ಸಾಂಪ್ರದಾಯಿಕ ಯಾವುದೇ ಕೃಷಿ ಚಟುವಟಿಕೆಗಳಿಗೆ ಸಕಾಲಕ್ಕೆ ಮಳೆ ಬಂದು ನೀರು ಸಂಗ್ರಹವಾದರೆ ಮಾತ್ರ ಅವು ಉಪಯುಕ್ತ. ಆದರೆ, ಜೂನ್ 20ರವರೆಗೂ ಮಳೆ ಸರಿಯಾಗಿ ಬಾರದೆ, ಬಿತ್ತನೆ ಮಾಡಿದ ಬೀಜಗಳು ಹಾಗೂ ನಾಟಿ ಮಾಡಿದ ಸಸಿಗಳು ಬಿಸಿಲಿನ ಬೇಗೆಗೆ ಬೆಂದು ಹೋಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ, ಭತ್ತದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ.
ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್, ಬ್ರಹ್ಮಾವರ.
PublicNext
20/06/2026 04:29 pm
LOADING...