ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮುಂಗಾರು ಮುನಿಸು: ಬಿತ್ತನೆ ಉತ್ಸಾಹಕ್ಕೆ ತಣ್ಣೀರೆರಚಿದ ಮಳೆ ಕೊರತೆ - ಕೃಷಿ ಚಟುವಟಿಕೆಗಳು ಮಂದಗತಿ!

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಪ್ರತಿ ವರ್ಷ ಈ ವೇಳೆಗೆ ಎಡಬಿಡದೆ ಧಾರಾಕಾರವಾಗಿ ಸುರಿಯುತ್ತಿದ್ದ ಮುಂಗಾರು ಮಳೆ ಈ ಬಾರಿ ಆರಂಭದಲ್ಲೇ ಸಂಪೂರ್ಣ ಕೈಕೊಟ್ಟಿದ್ದು, ಮಲೆನಾಡಿನ ಮಡಿಲಲ್ಲಿ ಈಗ ಬಿಸಿಲ ಬೇಗೆ ತೀವ್ರಗೊಂಡಿದೆ. ಜೂನ್ ತಿಂಗಳಿನಲ್ಲಿ ಧಾರಾಕಾರ ಮಳೆ ಬದಲು ಕಡು ಬೇಸಿಗೆಯಂತಹ ಹವಾಮಾನ ನಿರ್ಮಾಣವಾಗಿರುವುದು ಇಡೀ ಜಿಲ್ಲೆಯ ಜನರನ್ನು ಹಾಗೂ ರೈತರನ್ನು ಕಂಗಾಲಾಗಿಸಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಾತ್ರ ಮುಂಗಾರು ಪೂರ್ವ ಮಳೆ ಸುರಿದ್ದಿದ್ದು, ಬಯಲು ಸೀಮೆ ಭಾಗದ ತಾಲೂಕುಗಳಾದ ಕಡೂರು ಹಾಗೂ ತರೀಕೆರೆ, ಅಜ್ಜಂಪುರ ಭಾಗಗಳಲ್ಲಿ ಪರಿಸ್ಥಿತಿ ಮತ್ತಷ್ಟು ಭಿನ್ನವಾಗಿದೆ ಈ ಭಾಗದಲ್ಲಿ ಮುಂಗಾರು ಮಳೆಯೂ ಇಲ್ಲದೆ, ಪೂರ್ವ ಮುಂಗಾರು ಸುರಿಯದೆ ವಿಪರೀತ ಉಷ್ಣಾಂಶ ಹೆಚ್ಚಾಗುತ್ತಿದ್ದು, ಜನ ಮತ್ತು ಜಾನುವಾರುಗಳು ತತ್ತರಿಸುವಂತಾಗಿದೆ.

ಈ ತೀವ್ರ ಬಿಸಿಲಿನ ತಾಪಕ್ಕೆ ಬಯಲು ಸೀಮೆಯ ರೈತರು ಅಲ್ಪ ಸ್ವಲ್ಪ ಬೆಳೆದಿದ್ದ ಬೆಳೆಗಳೂ ಸಹ ಭೂಮಿಯಲ್ಲೇ ಸೀದು ಹೋಗುತ್ತಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿರುವ ಈ ಸಂದರ್ಭದಲ್ಲಿ ವರುಣನ ಕೃಪೆಗಾಗಿ ಚಾತಕ ಪಕ್ಷಿಯಂತೆ ರೈತರು ಕಾಯುತ್ತಿದ್ದಾರೆ.

ಇನ್ನು ಪೂರ್ವ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದ ಹಿನ್ನೆಲೆಯಲ್ಲಿ ಈ ಬಾರಿ ಹೆಸರು, ಉದ್ದು ಮತ್ತು ಅಲಸಂದೆ ಬಿತ್ತನೆ ಕ್ಷೇತ್ರವು ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಿದೆ. ಮಳೆಯ ಕೊರತೆಯು ರೈತರ ಬಿತ್ತನೆ ಉತ್ಸಾಹಕ್ಕೆ ತಣ್ಣೀರೆರಚಿದ್ದು, ಕೃಷಿ ಚಟುವಟಿಕೆಗಳು ಸದ್ಯಕ್ಕೆ ಮಂದಗತಿಯಲ್ಲಿ ಸಾಗುವಂತಾಗಿದೆ.

ಆದರೆ, ಮಳೆಯಿಲ್ಲದೆ ಕಂಗಾಲಾಗಿರುವ ರೈತರಿಗೆ ಕೃಷಿ ಇಲಾಖೆಯಿಂದ ಒಂದು ಸಮಾಧಾನಕರ ಸುದ್ದಿ ಸಿಕ್ಕಿದ್ದು, ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜಗಳನ್ನು ಮುಂಜಾಗ್ರತಾ ಕ್ರಮವಾಗಿ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ ರಸಗೊಬ್ಬರದ ಅಭಾವ ಸೃಷ್ಟಿಯಾಗಿಲ್ಲ ಅಧಿಕಾರಿಗಳು ಹೇಳುತ್ತಿದ್ದಾರೆ.

ಇದೇ ಹೊತ್ತಿನಲ್ಲಿ ಭಾರತೀಯ ಹವಾಮಾನ ಇಲಾಖೆಯು ಸಕಾರಾತ್ಮಕ ಮುನ್ಸೂಚನೆ ನೀಡಿದ್ದು ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಮತ್ತಷ್ಟು ಚುರುಕುಗೊಳ್ಳಲಿದ್ದು, ಮುಂದಿನ ಒಂದು ವಾರದ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಒಟ್ಟಾರೆ ಬಿಸಿಲ ಬೇಗೆಯಿಂದ ಬೆಂದು ಹೋಗುತ್ತಿರುವ ಮಲೆನಾಡು ಮತ್ತು ಬಯಲುಸೀಮೆಯ ಒಣ ಭೂಮಿಗೆ ಹವಾಮಾನ ಇಲಾಖೆಯ ಮುನ್ಸೂಚನೆ ಹೊಸ ಆಶಾಕಿರಣ ಮೂಡಿಸಿದೆ. ಸದ್ಯ ಜಿಲ್ಲೆಯನ್ನು ಆವರಿಸಿರುವ ಈ ಬರಡಾದ ವಾತಾವರಣ ಶೀಘ್ರದಲ್ಲೇ ದೂರವಾಗಿ, ಮುಂಗಾರಿನ ಹನಿಗಳು ರೈತರ ಮೊಗದಲ್ಲಿ ಮಂದಹಾಸ ಮೂಡಿಸಲಿ ಎಂಬುದೇ ಎಲ್ಲರ ಆಶಯ.

ಡ್ಯಾನಿ, ಪಬ್ಲಿಕ್ ನೆಕ್ಸ್ಟ್ ಚಿಕ್ಕಮಗಳೂರು

Edited By : Somashekar
PublicNext

PublicNext

17/06/2026 01:10 pm

Cinque Terre

7.02 K

Cinque Terre

0

ಸಂಬಂಧಿತ ಸುದ್ದಿ