ಚಿಕ್ಕಮಗಳೂರು: ಕರ್ನಾಟಕದ 19 ಜಿಲ್ಲೆಗಳಲ್ಲಿ ವಿದ್ಯುತ್ ಖಾಸಗೀಕರಣ ಮಾಡಿ, ಅದನ್ನು ಟಾಟಾ ಪವರ್ ಲಿಮಿಟೆಡ್ ಸಂಸ್ಥೆಗೆ ವಹಿಸಲು ಹುನ್ನಾರ ನಡೆಯುತ್ತಿದೆ ಎಂಬ ಆತಂಕ ಕೇಳಿಬರುತ್ತಿವೆ. ಕರ್ನಾಟಕ ರಾಜ್ಯ ರೈತ ಸಂಘವು ಈ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸುತ್ತದೆ ಎಂದು ರೈತ ಮುಖಂಡ ಗುರುಶಾಂತಪ್ಪ ತಿಳಿಸಿದ್ದಾರೆ.
ಇದಕ್ಕೆ ಇರುವ ಪ್ರಮುಖ ಕಾರಣಗಳೆಂದರೆ, ಕರ್ನಾಟಕವು ಅತಿ ಹೆಚ್ಚು ಕೃಷಿಕರನ್ನು ಮತ್ತು ದೇಶದಲ್ಲೇ ಅತಿ ಹೆಚ್ಚು ಅಂದರೆ ಸುಮಾರು 45 ಲಕ್ಷ ಕೃಷಿ ಪಂಪ್‌ಸೆಟ್‌ಗಳನ್ನು ಹೊಂದಿರುವ ರಾಜ್ಯವಾಗಿದೆ. ರೈತರು ಕೊಳವೆ ಬಾವಿಗಳ ಮೂಲಕ ಈ ಪಂಪ್‌ಸೆಟ್‌ಗಳನ್ನು ಬಳಸಿ ತಮ್ಮ ಜಮೀನುಗಳಿಗೆ ನೀರಾವರಿ ಮಾಡಿಕೊಳ್ಳುತ್ತಿದ್ದಾರೆ. ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವುದರಿಂದ ರೈತರಿಗೆ ಸಿಗುತ್ತಿರುವ ವಿದ್ಯುತ್ ಸಬ್ಸಿಡಿಯನ್ನು ತೆಗೆದುಹಾಕುವ ವ್ಯವಸ್ಥೆ ಜಾರಿಗೆ ಬರಬಹುದು. ಇದರಿಂದಾಗಿ ರೈತರ ಬೆಳೆಯುವ ಶಕ್ತಿ ಕುಂಠಿತಗೊಂಡು, ಕೃಷಿ ಉತ್ಪನ್ನಗಳು ಕಡಿಮೆಯಾಗುತ್ತವೆ ಮತ್ತು ದೇಶದ ಆಹಾರ ಭದ್ರತೆಗೆ ದೊಡ್ಡ ಧಕ್ಕೆ ಉಂಟಾಗಬಹುದು.
ಇದಲ್ಲದೆ, ಸರ್ಕಾರವು ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು ಹಾಗೂ ಗೃಹಜ್ಯೋತಿ, ಭಾಗ್ಯಜ್ಯೋತಿಯಂತಹ ಯೋಜನೆಗಳ ಮೂಲಕ ಜನರಿಗೆ ವಿದ್ಯುತ್ ಸೌಲಭ್ಯ ನೀಡುತ್ತಿದೆ. ಸದ್ಯದ ವ್ಯವಸ್ಥೆಯಲ್ಲಿ ಸಬ್ಸಿಡಿ ವಿತರಣೆ ಸಮರ್ಪಕವಾಗಿ ನಡೆಯುತ್ತಿದೆ.
ಆದರೆ, ಗ್ರಾಹಕರನ್ನು ಖಾಸಗಿ ಕಂಪನಿಗಳಿಗೆ ಹಂಚಿಕೆ ಮಾಡುವುದರಿಂದ ಖಾಸಗಿಯವರಿಗೆ ಒಂದು ನೀತಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಮತ್ತೊಂದು ನೀತಿಯಾಗಿ ಕ್ರಾಸ್ ಸಬ್ಸಿಡಿ ವ್ಯವಸ್ಥೆಯ ಮೂಲಕ ಒಟ್ಟಾರೆ ಸಬ್ಸಿಡಿ ವ್ಯವಸ್ಥೆಯೇ ಸರ್ವನಾಶವಾಗುವ ಭೀತಿ ಇದೆ.
ಈಗಾಗಲೇ ಟಾಟಾ ಪವರ್ ಲಿಮಿಟೆಡ್ ಸಂಸ್ಥೆಯು ಮುಂಬೈ, ಅಜ್ಮೀರ್, ದೆಹಲಿ, ಬಿಹಾರ್ ಸೇರಿದಂತೆ ಹಲವೆಡೆ ತನ್ನ ಜಾಲವನ್ನು ವಿಸ್ತರಿಸಿದೆ. ಆದರೆ, ಅಲ್ಲಿನ ಸಾರ್ವಜನಿಕ ವಲಯದ ವಿದ್ಯುತ್ ಪೂರೈಕೆಗೆ ಹೋಲಿಸಿದರೆ ಖಾಸಗಿ ಸಂಸ್ಥೆಯು ಕಳಪೆ ಗುಣಮಟ್ಟದ ವಿದ್ಯುತ್ ನೀಡುತ್ತಿದ್ದು, ದರಗಳು ಕೂಡ ಅತ್ಯಂತ ಹೆಚ್ಚಾಗಿವೆ. ಇದು ಅಂತಿಮವಾಗಿ ಸಾರ್ವಜನಿಕರ ಮೇಲೆ ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ.
ಕರ್ನಾಟಕದ 19 ಜಿಲ್ಲೆಗಳಲ್ಲಿ ಖಾಸಗೀಕರಣ ಮಾಡುವುದರಿಂದ ಸುಮಾರು 55,000 ದಿಂದ 60,000 ಉದ್ಯೋಗಗಳು ನಷ್ಟವಾಗುವ ಅಂದಾಜಿದೆ. ಅಷ್ಟೇ ಅಲ್ಲದೆ, ಟಾಟಾ ಪವರ್ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಯಾವುದೇ ಉದ್ಯೋಗ ಭದ್ರತೆ ಇರುವುದಿಲ್ಲ. ನಿವೃತ್ತಿ ವೇತನವಾಗಲಿ ಅಥವಾ ಆರೋಗ್ಯ ವೇತನವಾಗಲಿ ಸಿಗದೆ, ಅವರು ಜೀತದಾಳುಗಳಂತೆ ದುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.
ಯಾವುದೇ ಹೊಸ ಕೈಗಾರಿಕೆಗಳು ಅಥವಾ ಟೌನ್‌ಶಿಪ್‌ಗಳು ಹೆಚ್ಚಾಗಿ ಸ್ಥಾಪನೆಯಾಗದಿದ್ದರೂ, ವಿದ್ಯುತ್ ಬೇಡಿಕೆ ನೆಪವೊಡ್ಡಿ ಈ ರೀತಿ ಖಾಸಗೀಕರಣ ಮಾಡುವುದು ಸರಿಯಲ್ಲ.
ಆದ್ದರಿಂದ, ಈಗಿರುವ ಸರ್ಕಾರಿ ವ್ಯವಸ್ಥೆಯನ್ನೇ ಇನ್ನಷ್ಟು ಸುಧಾರಿಸಿ, ಕರ್ನಾಟಕದ ವಿದ್ಯುತ್ ವಲಯವನ್ನು ಖಾಸಗೀಕರಣದಿಂದ ಮುಕ್ತವಾಗಿ ಉಳಿಸಬೇಕು ಎಂಬುದು ರೈತ ಮುಖಂಡರ ಮತ್ತು ಸಂಘಟನೆಗಳ ಪ್ರಬಲ ಒತ್ತಾಯವಾಗಿದೆ ಎಂದು ಗುರುಶಾಂತಪ್ಪ ತಿಳಿಸಿದ್ದಾರೆ.
PublicNext
17/06/2026 07:12 pm