ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಮಲೆನಾಡ ಮನೆಗಳಲ್ಲಿ ಕೆಸದೆಲೆಯ ಕಮಾಲ್ - 'ಮಳೆಗಾಲದ ಸಂಜೀವಿನಿ' ಬಗ್ಗೆ ನಿಮಗೆ ಗೊತ್ತಾ?

ಚಿಕ್ಕಮಗಳೂರು: ಈ ಬಾರಿ ಕಾಫಿನಾಡಿನಲ್ಲಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಸುರಿಯದೆ ಆರಂಭದಲ್ಲೇ ಕುಂಠಿತಗೊಂಡಿದ್ದು, ಕೃಷಿಕರಲ್ಲಿ ಆತಂಕ ಮೂಡಿಸಿದೆ. ಜುಳುಜುಳು ಹರಿಯಬೇಕಿದ್ದ ತೊರೆಗಳು ಜಿನುಗುತ್ತಿವೆ, ಹಸಿರು ಹೊದೆಯಬೇಕಿದ್ದ ಬೆಟ್ಟಗಳು ಮಳೆಯ ಮುನಿಸಿಗೆ ಕಾಯುತ್ತಿವೆ. ಆದರೆ, ಇಂತಹ ವಾತಾವರಣದ ನಡುವೆಯೂ ಮುಂಗಾರಿನ ಆರಂಭದ ಅಲ್ಪಸ್ವಲ್ಪ ಮಳೆಗೆ ಮಲೆನಾಡಿಗರ ಮನೆಮನಗಳಲ್ಲಿ ಕೆಸದ ಎಲೆಗಳ ಕಾರುಬಾರು ಮಾತ್ರ ಕಡಿಮೆಯಾಗಿಲ್ಲ. ಹಿತ್ತಲಿನ ಬೇಲಿ ಬದಿ, ಕಾಫಿ ತೋಟದ ತೇವಭರಿತ ಜಾಗಗಳಲ್ಲಿ ತಾನಾಗಿಯೇ ಸೊಂಪಾಗಿ ಬೆಳೆದು ನಿಲ್ಲುವ ಕೆಸದ ಎಲೆಗಳು ಮತ್ತು ದಂಟುಗಳು ಈಗ ಮಲೆನಾಡಿನ ಅಡುಗೆ ಮನೆಗಳನ್ನು ಪ್ರವೇಶಿಸುತ್ತಿವೆ. ಮಲೆನಾಡಿನ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯಲ್ಲಿ ಕೆಸದ ಬಳಕೆಗೆ ವಿಶಿಷ್ಟ ಹಾಗೂ ಅತ್ಯುನ್ನತ ಸ್ಥಾನವಿದೆ. ಮಳೆಗಾಲದ ಚಳಿಗೆ ಬಿಸಿಬಿಸಿ ಹಾಗೂ ಖಾರಖಾರವಾದ ಆಹಾರ ಪದಾರ್ಥಗಳನ್ನು ಸವಿಯುವುದೇ ವಿಶೇಷ ಅನುಭವ. ಈ ನಿಟ್ಟಿನಲ್ಲಿ ಮಲೆನಾಡಿಗರ ಮೊದಲ ಆಯ್ಕೆ ಕೆಸದೆಲೆಯಿಂದ ಸಿದ್ಧವಾಗುವ ಸಾಂಪ್ರದಾಯಿಕ ತಿನಿಸು 'ಪತ್ರೊಡೆ'. ಅಕ್ಕಿ ಮತ್ತು ಮಸಾಲೆ ಪದಾರ್ಥಗಳನ್ನು ಅರೆದು, ಕೆಸದೆಲೆಗಳಿಗೆ ಸವರಿ, ಸುರುಳಿ ಸುತ್ತಿ ಹಬೆಯಲ್ಲಿ ಬೇಯಿಸಿ ತಯಾರಿಸುವ ಈ ಪತ್ರೊಡೆಯ ಘಮ ಇಡೀ ಮನೆಯನ್ನು ಆವರಿಸುತ್ತದೆ. ಇದನ್ನು ಸಾಸಿವೆ-ಕರಿಬೇವಿನ ಒಗ್ಗರಣೆ ಕೊಟ್ಟು ಸವಿಯುವ ಮಜಾವೇ ಬೇರೆ. ಕೇವಲ ಪತ್ರೊಡೆ ಮಾತ್ರವಲ್ಲದೆ, ಕೆಸದೆಲೆಯ ಚಟ್ನಿ, ದಂಟಿನ ಹುಳಿ ಮತ್ತು ಮಣ್ಣಿನ ಕೆಳಗಿನ ಕೆಸದ ಗೆಡ್ಡೆಯ ಪಲ್ಯ ಮಳೆಗಾಲದ ಊಟದ ರುಚಿಯನ್ನು ನೂರು ಪಟ್ಟು ಹೆಚ್ಚಿಸುತ್ತವೆ.

ಇನ್ನು ಕೆಸದ ಬಳಕೆ ಕೇವಲ ನಾಲಿಗೆಯ ರುಚಿಗಷ್ಟೇ ಸೀಮಿತವಾಗಿಲ್ಲ; ಇದರ ಹಿಂದೆ ಆಯುರ್ವೇದದ ದೊಡ್ಡ ರಹಸ್ಯವೇ ಅಡಗಿದೆ. ಕೆಸದ ಎಲೆಗಳಲ್ಲಿ ಕಬ್ಬಿಣದಂಶ ಹಾಗೂ ನಾರಿನಂಶ ಹೇರಳವಾಗಿದ್ದು, ಮಳೆಗಾಲದಲ್ಲಿ ಕಾಡುವ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಇದು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ. ಕೆಸದ ಅಡುಗೆಯನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಸಂಗ್ರಹವಾಗಿರುವ ತಲೆಗೂದಲು ಸೇರಿದಂತೆ ಇತರೆ ಅನಗತ್ಯ ಅಥವಾ ಬೇಡದ ಕಲ್ಮಶಗಳು ಮಲದ ಮೂಲಕ ಸುಲಭವಾಗಿ ಹೊರಹೋಗುತ್ತವೆ. ಕೆಸದ ಎಲೆ ಹಾಗೂ ದಂಟುಗಳಲ್ಲಿ ನಾರಿನಂಶ ಅತ್ಯಂತ ಹೇರಳವಾಗಿರುವುದರಿಂದ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಮತ್ತು ಮಲಬದ್ಧತೆಯನ್ನು ನಿವಾರಿಸಲು ರಾಮಬಾಣದಂತೆ ಕೆಲಸ ಮಾಡುತ್ತದೆ. ಕೆಸದ ಸಸ್ಯದಲ್ಲಿ ನೈಸರ್ಗಿಕವಾಗಿ ಇರುವ ತುರಿಕೆ ಗುಣವನ್ನು ಹೋಗಲಾಡಿಸಲು ಹುಣಿಸೇಹಣ್ಣು, ಬಿಂಬಳ ಅಥವಾ ಮಜ್ಜಿಗೆಯಂತಹ ಹುಳಿ ಪದಾರ್ಥಗಳನ್ನು ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲವನ್ನು ಬಳಸಿ, ಚೆನ್ನಾಗಿ ಬೇಯಿಸುವ ಮೂಲಕ ಈ ತುರಿಕೆಯನ್ನು ಸಂಪೂರ್ಣವಾಗಿ ಹೋಗಲಾಡಿಸಲಾಗುತ್ತದೆ. ಇದು ಮಲೆನಾಡಿಗರ ಸಾಂಪ್ರದಾಯಿಕ ಪಾಕಪ್ರಾವೀಣ್ಯತೆಗೆ ಹಿಡಿದ ಕೈಗನ್ನಡಿಯಾಗಿದ್ದು

ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದ ಜನರಿಗೂ ಈ ಮಲೆನಾಡಿನ ಕೆಸದ ಅಡುಗೆಗಳ ಕ್ರೇಜ್ ಹೆಚ್ಚಾಗುತ್ತಿದೆ. ಪ್ರಕೃತಿ ದತ್ತವಾಗಿ ಸಿಗುವ ಈ ಪೌಷ್ಟಿಕ ಆಹಾರವು ಮಲೆನಾಡಿನ ಜನಜೀವನ, ಸಂಸ್ಕೃತಿ ಮತ್ತು ಹಬ್ಬ ಹರಿದಿನಗಳೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. .

ಒಟ್ಟಾರೆ ಕೆಸದ ಅಡುಗೆ ಕೇವಲ ನಾಲಿಗೆಯ ರುಚಿಯಷ್ಟೇ ಅಲ್ಲ, ಮಳೆಗಾಲದ ಆರೋಗ್ಯ ಕಾಪಾಡುವ ನೈಸರ್ಗಿಕ ಸಂಜೀವಿನಿಯಾಗಿದ್ದು ಪ್ರಕೃತಿಯೇ ನೀಡುವ ಈ ಅದ್ಭುತ ಕೊಡುಗೆಯನ್ನು ಸವಿಯುತ್ತಾ, ಆರೋಗ್ಯದ ರಕ್ಷಣೆಯೊಂದಿಗೆ ಮಲೆನಾಡಿನ ವಿಶಿಷ್ಟ ಆಹಾರ ಸಂಸ್ಕೃತಿಯನ್ನು ಇಂದಿನ ತಲೆಮಾರಿಗೂ ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಡ್ಯಾನಿ ಪಬ್ಲಿಕ್ ನೆಕ್ಸ್ಟ್ ಚಿಕ್ಕಮಗಳೂರು

Edited By : Somashekar
PublicNext

PublicNext

18/06/2026 11:51 am

Cinque Terre

16.2 K

Cinque Terre

0

ಸಂಬಂಧಿತ ಸುದ್ದಿ