ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮೃತದೇಹದ ನಿರ್ವಹಣೆ ಕೆಲಸದಿಂದ ಕುಡಿತದ ದಾಸನಾಗಿ ಮಾನಸಿಕ ಅಸ್ವಸ್ಥನಾದ ಪದವೀಧರ - ಮತ್ತೆ ಬದುಕು ಕಲ್ಪಿಸಿದ 'ವೈಟ್‌ಡೌಸ್'

ಮಂಗಳೂರು: ಐಸಿಯುನಲ್ಲಿನ ಮೃತದೇಹದ ನಿರ್ವಹಣೆಯ ಕೆಲಸ ಇವರನ್ನು ಕುಡಿತದ ಕಡೆಗೆ ವಾಲಿಸಿತು. ಮದ್ಯಕ್ಕೆ ದಾಸನಾಗುತ್ತಿದ್ದಂತೆ ಮನೆಮಂದಿ ತೊರೆದು ಹೋದರು. ಒಂಟಿ ಜೀವನದಿಂದ ಬೇಸತ್ತು ಮನೆ ಬಿಟ್ಟರು. ಬೀದಿಗೆ ಬಿದ್ದವರು ಮಾನಸಿಕ ಅಸ್ವಸ್ಥರಾದರು. ತಾನು ಯಾರೆಂದು ಅರಿವಿಲ್ಲದೆ, ಬೀದಿಬೀದಿ ಅಳೆಯುತ್ತಿದ್ದ ಇವರಿಗೆ ವೈಟ್‌ಡೌಸ್‌ನಲ್ಲಿ ಸಿಕ್ಕ ಆಶ್ರಯ. ಮತ್ತೆ ಮನುಷ್ಯನನ್ನಾಗಿಸಿ ಕುಟುಂಬ ಸೇರುವಂತೆ ಮಾಡಿತು.

ಹೌದು... ಇದು ಹೊನ್ನಾವರದ ಪುರುಷೋತ್ತಮ ನಾಯ್ಕ್ ಎಂಬ ವ್ಯಕ್ತಿಯ ವ್ಯಥೆಯ ಕಥೆ. ಹೇಳಿಕೇಳಿ ಇವರು ಬಿಎ ಪದವೀಧರ. ಶಾಲಾ ದಿನಗಳಿಂದಲೇ ಸಾಹಿತ್ಯ ಅಭಿರುಚಿಯಿದ್ದವರು. ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಮೃತದೇಹದ ನಿರ್ವಹಣೆ ಮಾಡುತ್ತಿದ್ದ ಇವರು, ಈ ಕೆಲಸದ ಒತ್ತಡದಿಂದ ಮದ್ಯಪಾನ ಮಾಡಲು ಆರಂಭಿಸಿದರು. ಕೊಂಚ ಅತಿರೇಕಕ್ಕೆ ಹೋಗಿ ಮದ್ಯವ್ಯಸನಿಯಾದರು. ಬಳಿಕ ಹೋಮ್‌ಗಾರ್ಡ್ ಕೆಲಸಕ್ಕೆ ಸೇರಿದರು. ಈ ನಡುವೆ ಇವರ ಅತಿರೇಕದ ಮದ್ಯವ್ಯಸನದಿಂದ ಬೇಸತ್ತು ಪತ್ನಿ ಮಗನೊಂದಿಗೆ ತವರುಮನೆ ಸೇರಿದರು. ಅಣ್ಣಂದಿರೂ ದೂರವಾದರು. ಈ ಒಂಟಿತನ ಮನೆ ಬಿಡುವಂತೆ ಮಾಡಿತು. ಮನೆಬಿಟ್ಟು ಬೀದಿಗೆ ಬಿದ್ದ ಬಳಿಕ ಅಕ್ಷರಶಃ ಮಾನಸಿಕ ಅಸ್ವಸ್ಥರಾದರು.

2019ರಲ್ಲಿ ವೈಟ್‌ಡೌಸ್‌ನ ಕೊರಿನ್ ರಸ್ಕಿನಾ ಅವರು ಪುರುಷೋತ್ತಮ ನಾಯ್ಕ್‌ರನ್ನು ಬೀದಿಬದಿಯಿಂದ ರಕ್ಷಿಸಿದಾಗ ಎರಡೂ ಕಾಲುಗಳ ನೋವಿನಿಂದ ಬಳಲುತ್ತಿದ್ದರು. ಮಾನಸಿಕ ಸ್ಥಿಮಿತ ಕಳೆದುಕೊಂಡರು. ವೈಟ್‌ಡೌಸ್‌ನಲ್ಲಿ ಸಿಕ್ಕ ಶುಶ್ರೂಷೆಯಿಂದ ಮಾನಸಿಕ ಆರೋಗ್ಯ ಸುಧಾರಿಸಿ ಮನೆಮಂದಿ, ಪತ್ನಿ-ಮಗನ ನೆನಪು ಮಾಡುತ್ತಿದ್ದರು. ಮತ್ತೆ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಲು ಆರಂಭಿಸಿದರು. ತಾನು ಪತ್ನಿ - ಮಗನನ್ನು ಕಡೆಗಣಿಸಿದೆ ಎಂದು ಪಶ್ಚಾತ್ತಾಪದ ಬೇಗುದಿಯಲ್ಲಿ ಬೇಯುತ್ತಿದ್ದರು. ಇದನ್ನು ಬರವಣಿಗೆಗೆ ಇಳಿಸಿದರು.

ವಿಪರ್ಯಾಸವೆಂದರೆ ವೈಟ್‌ಡೌಸ್ ಸಂಸ್ಥೆ ಪುರುಷೋತ್ತಮ ನಾಯ್ಕ್ ಅವರ ಮನೆಯವರ ಫೋನ್ ನಂಬರ್ ಪತ್ತೆ ಮಾಡಿ ಕರೆ ಮಾಡಿದರೂ ಯಾರೂ ಅವರನ್ನು ಮನೆಗೆ ಕರೆದೊಯ್ಯಲು ತಯಾರಿಲ್ಲ. ಇವರು ಮಾತನಾಡಲು, ಮನೆಗೆ ಹೋಗಲು, ಮಗನನ್ನು ನೋಡಲು ಹಾತೊರೆಯುತ್ತಿದ್ದರೂ ಸಹೋದರರು, ಪತ್ನಿ, ಮಗ ಕಡೆಪಕ್ಷ ಇವರಲ್ಲಿ ಮಾತನಾಡಲೂ ತಯಾರಿರಲಿಲ್ಲ. ಕೊನೆಗೆ ವಾಟ್ಸ್‌ಆ್ಯಪ್ ವೀಡಿಯೋ ಕರೆಯನ್ನು ಸ್ವೀಕರಿಸಿದ ಪುತ್ರ ಇವರೊಂದಿಗೆ ಮಾತನಾಡಿದ ಬಳಿಕ ಮನಸ್ಸು ಬದಲಿಸಿ ಮನೆಗೆ ಕರೆದೊಯ್ಯಲು ಒಪ್ಪಿದ.

ಅದರಂತೆ ಇಂದು ಪತ್ನಿ, ಸಹೋದರರು, ಪುತ್ರ ಬಂದು ಪುರುಷೋತ್ತಮ ನಾಯ್ಕ್‌ರನ್ನು ಕರೆದೊಯ್ದಿದ್ದಾರೆ. ಈಗಲೂ ತನ್ನಿಂದ ತಪ್ಪಾಗಿದೆ ಎಂದು ಪಶ್ಚಾತ್ತಾಪದ ಬೇಗುದಿಯಲ್ಲಿ ಬೇಯುತ್ತಲೇ ಪುರುಷೋತ್ತಮ ನಾಯ್ಕ್ ಮನೆಕಡೆಗೆ ಹೆಜ್ಜೆಹಾಕಿದ್ದಾರೆ. ಇನ್ನಾದರೂ ಆ ಹಿರಿಜೀವಕ್ಕೊಂದಿಷ್ಟು ನೆಮ್ಮದಿಯ ಜೀವನ ಸಿಕ್ಕಲಿ ಎಂಬುದೇ ನಮ್ಮ ಆಶಯ.

Edited By :
PublicNext

PublicNext

18/06/2026 07:35 am

Cinque Terre

11.26 K

Cinque Terre

0

ಸಂಬಂಧಿತ ಸುದ್ದಿ