ಮಂಗಳೂರು: ಪ್ರತೀ ವರ್ಷದಂತೆ ಜೂನ್ ತಿಂಗಳ ಮೊದಲ ವಾರದಲ್ಲಿ ಕರಾವಳಿಗೆ ಮುಂಗಾರು ಪ್ರವೇಶಿಸಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೆ ಮುಂಗಾರು ಕ್ಷೀಣಗೊಂಡ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಆದ್ದರಿಂದ ಕುಡಿಯುವ ನೀರಿನ ಶೇಖರಣೆಯ ಹಿತದೃಷ್ಟಿಯಿಂದ ತುಂಬೆ ಡ್ಯಾಂನ ಎಲ್ಲಾ ಗೇಟ್‌ಗಳನ್ನು ಮುಚ್ಚಿ ನೀರನ್ನು ಸಂರಕ್ಷಿಸಲಾಗುತ್ತಿದೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜೂನ್ 17ರ ವರದಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸಾಮಾನ್ಯವಾಗಿ 36.5 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಕೇವಲ 3.3 ಮಿ.ಮೀ. ಮಾತ್ರ ದಾಖಲಾಗಿದೆ. ಜನವರಿ 1ರಿಂದ ಜೂನ್ 17ರವರೆಗೆ ಜಿಲ್ಲೆಯಲ್ಲಿ ಸಾಮಾನ್ಯವಾಗಿ 668.7 ಮಿ.ಮೀ. ಮಳೆಯಾಗಬೇಕಿದ್ದರೆ, ಕೇವಲ 390.7 ಮಿ.ಮೀ. ಮಳೆಯಷ್ಟೇ ದಾಖಲಾಗಿದೆ. ದ.ಕ.ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಮಳೆ ಕೊರತೆ ಕಂಡುಬಂದಿದೆ.
ಮಳೆ ಕೊರತೆಯು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನದಿಗಳ ನೀರಿನ ಮಟ್ಟದಲ್ಲೂ ಗೋಚರಿಸಿದೆ. ಕಳೆದ ವರ್ಷ ಬಂಟ್ವಾಳದ ನೇತ್ರಾವತಿ ನದಿಯಲ್ಲಿ ಅಪಾಯದ ಮಟ್ಟ 9 ಮೀಟರ್ ಇದ್ದರೆ, ಪ್ರಸ್ತುತ ನೀರಿನ ಮಟ್ಟ ಕೇವಲ 4.58 ಮೀಟರ್ ಇದೆ. ಮಂಗಳೂರಿಗೆ ಕುಡಿಯುವ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಗರಿಷ್ಠ ನೀರಿನ ಮಟ್ಟ 6 ಮೀಟರ್ ಆಗಿದ್ದು, ಪ್ರಸ್ತುತ 5 ಮೀಟರ್ ನೀರಿದೆ. ಆದ್ದರಿಂದ ನೀರಿನ ಸಂಗ್ರಹವನ್ನು ಕಾಪಾಡುವ ಉದ್ದೇಶದಿಂದ ಡ್ಯಾಂನ ಎಲ್ಲ ಗೇಟ್‌ಗಳನ್ನು ಮುಚ್ಚಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮುಂಗಾರು ಆರಂಭವಾಗಿ ಅರ್ಧ ತಿಂಗಳು ಕಳೆದರೂ ಜಿಲ್ಲೆಯಲ್ಲಿ ಉತ್ತಮ ಮಳೆಯ ಕೊರತೆ ಮುಂದುವರಿದಿರುವುದು ಆತಂಕಕ್ಕೆ ಕಾರಣವಾಗಿದೆ. ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ಮಳೆ ಚುರುಕುಗೊಳ್ಳುವ ನಿರೀಕ್ಷೆ ವ್ಯಕ್ತಪಡಿಸಿದ್ದರೂ, ಅಲ್ಲಿಯವರೆಗೆ ಕುಡಿಯುವ ನೀರಿನ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ತುಂಬೆ ಡ್ಯಾಂನಲ್ಲಿ ನೀರು ಸಂರಕ್ಷಿಸುವ ಕ್ರಮ ಮುಂದುವರಿಯುವ ಸಾಧ್ಯತೆ ಇದೆ.
PublicNext
18/06/2026 07:08 pm