ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಗುಡಿ ಕೈಗಾರಿಕೆ ಹೆಸರಲ್ಲಿ ಕೋಟೆನಾಡಲ್ಲಿ ಕೋಟಿ ಕೋಟಿ ಪಂಗನಾಮ - ಗ್ರಾಹಕರು ಕಂಗಾಲು

ಚಿತ್ರದುರ್ಗ: ಕೋಟೆನಾಡಿನಲ್ಲಿ ಗುಡಿ ಕೈಗಾರಿಕೆಯ ಹೆಸರಿನಲ್ಲಿ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗದ ಆಮಿಷವೊಡ್ಡಿ, ಕೋಟಿಗಟ್ಟಲೆ ಹಣ ವಂಚಿಸಿ ಕಂಪನಿ ಮುಖ್ಯಸ್ಥರು ಪರಾರಿಯಾಗಿದ್ದಾರೆ.

ಆಂಧ್ರ ಮೂಲದ ಎಸ್.ಎಲ್.ವಿ ಮಹಿಳಾ ಮಾರ್ಟ್ ಕಂಪನಿ ನಡೆಸಿದ ಈ ಮಹಾ ವಂಚನೆಯಿಂದ ಚಿತ್ರದುರ್ಗ ಜಿಲ್ಲೆಯ ನೂರಾರು ಗ್ರಾಹಕರು ಕಂಗಾಲಾಗಿದ್ದಾರೆ.

ಎಸ್.ಎಲ್.ವಿ ಮಹಿಳಾ ಮಾರ್ಟ್ ಕಂಪನಿಯು ನಿರುದ್ಯೋಗಿ ಮಹಿಳೆಯರಿಗೆ 'ವರ್ಕ್ ಫ್ರಂ ಹೋಂ' ಉದ್ಯೋಗ ನೀಡುವುದಾಗಿ ಭರವಸೆ ನೀಡಿತ್ತು. ಅಗರಬತ್ತಿ, ಮೇಣದಬತ್ತಿ ಹಾಗೂ ಸಾಂಬ್ರಾಣಿ ಪ್ಯಾಕಿಂಗ್ ಮಾಡುವ ಮೂಲಕ ಮನೆಯಲ್ಲೇ ಕುಳಿತು ಸಾವಿರಾರು ರೂಪಾಯಿ ಗಳಿಸಬಹುದು ಎಂದು ಆಮಿಷವೊಡ್ಡಿತ್ತು.

ಆರಂಭದಲ್ಲಿ ಕಂಪನಿಯು ಗ್ರಾಹಕರಿಂದ ಹಣವನ್ನು ಠೇವಣಿಯಾಗಿ ಇಡುವಂತೆ ಸೂಚಿಸಿತ್ತು. ಉದ್ಯೋಗದ ಆಸೆಗೆ ಬಿದ್ದಿದ್ದ ಜನರು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು.

ಕಳೆದ ಐದಾರು ತಿಂಗಳಿಂದ, ಕಂಪನಿ ಮುಖ್ಯಸ್ಥ ಬೊಮ್ಮಲು ರಾಜೇಶ್ ಅಧಿಕ ಸಂಬಳ ನೀಡಿ ಗ್ರಾಹಕರ ವಿಶ್ವಾಸ ಗಳಿಸಿದ್ದ. ಹೂಡಿಕೆ ಮಾಡಿದ ಹಣಕ್ಕೆ ತಕ್ಕಂತೆ ಗ್ರಾಹಕರು ಆರಂಭದಲ್ಲಿ ಉತ್ತಮ ಲಾಭ ಗಳಿಸಿದ್ದರಿಂದ, ಹೆಚ್ಚಿನ ಲಾಭದ ಆಸೆಗೆ ಬಿದ್ದು ಮತ್ತೆ ಲಕ್ಷಾಂತರ ರೂಪಾಯಿಗಳನ್ನು ಎಸ್.ಎಲ್.ವಿ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು.

ಬೃಹತ್ ಮೊತ್ತದ ವಂಚನೆ ಮತ್ತು ನ್ಯಾಯಕ್ಕಾಗಿ ಆಗ್ರಹ

ಗ್ರಾಹಕರ ಈ ಹಣದ ಹೂಡಿಕೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಕಂಪನಿ ಮುಖ್ಯಸ್ಥ ಬೊಮ್ಮಲು ರಾಜೇಶ್ ಹಾಗೂ ಮ್ಯಾನೇಜರ್ ಹೇಮಂತ್, ಇದೀಗ ಕಂಪನಿಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾರೆ.

ಮಹಿಳೆಯರು ಮನೆಯಲ್ಲಿ ಕೂಡಿಟ್ಟ ಲಕ್ಷಾಂತರ ರೂಪಾಯಿ ಹಣವನ್ನು ಎಸ್.ಎಲ್.ವಿ ಮಾರ್ಟ್ ಕಂಪನಿಯಲ್ಲಿ ಹೂಡಿಕೆ ಮಾಡಿದ್ದು, ಇದೀಗ ಕಂಪನಿ ಜನರಿಗೆ ಪಂಗನಾಮ ಹಾಕಿ ಪರಾರಿಯಾಗಿದೆ.

ಚಿತ್ರದುರ್ಗ ಜಿಲ್ಲೆಯೊಂದರಲ್ಲೇ ಒಟ್ಟು 450ಕ್ಕೂ ಹೆಚ್ಚು ಮಂದಿ ಈ ವಂಚನೆಗೆ ಒಳಗಾಗಿದ್ದು, 60 ಕೋಟಿಗೂ ಅಧಿಕ ಹಣವನ್ನು ಕಂಪನಿ ಮುಖ್ಯಸ್ಥ ಸೇರಿ ಹಲವರು ಎಗರಿಸಿಕೊಂಡು ಕಾಲ್ಕಿತ್ತಿದ್ದಾರೆ.

ಹಣ ಕಳೆದುಕೊಂಡಿದ್ದ ಗ್ರಾಹಕರು ಚಿತ್ರದುರ್ಗ ಎಸ್ಪಿ ಕಚೇರಿ ಮೆಟ್ಟಿಲೇರಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಒಟ್ಟಾರೆ, ಅಗರಬತ್ತಿ, ಮೇಣದಬತ್ತಿ ಪ್ಯಾಕಿಂಗ್ ಎಂದು ನಂಬಿಸಿ, ಚಿತ್ರದುರ್ಗದಲ್ಲಿ ನೂರಾರು ಮಂದಿಗೆ ಕೋಟಿಗಟ್ಟಲೆ ಹಣವನ್ನು ವಂಚಿಸಿ ಎಸ್.ಎಲ್.ವಿ ಕಂಪನಿ ಮುಖ್ಯಸ್ಥ ಬೊಮ್ಮಲು ರಾಜೇಶ್ ನಾಪತ್ತೆಯಾಗಿದ್ದಾನೆ. ಉದ್ಯೋಗವೂ ಇಲ್ಲದೆ, ಹೂಡಿಕೆ ಮಾಡಿದ ಹಣವೂ ಸಿಗದೆ ಗ್ರಾಹಕರು ಕಂಗಾಲಾಗಿದ್ದಾರೆ.

ಇಂತಹ ವಂಚನೆ ಎಸಗಿರುವ ಕಂಪನಿ ಮುಖ್ಯಸ್ಥರನ್ನು ಚಿತ್ರದುರ್ಗ ಕೋಟೆ ಠಾಣೆ ಪೊಲೀಸರು ಕೂಡಲೇ ಬಂಧಿಸಿ, ಬಡ ಜನರಿಗೆ ನ್ಯಾಯ ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By :
PublicNext

PublicNext

19/06/2026 08:03 am

Cinque Terre

12.5 K

Cinque Terre

0

ಸಂಬಂಧಿತ ಸುದ್ದಿ