ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನೀಟ್ ಮರು ಪರೀಕ್ಷೆ - ಯಾವುದೇ ಲೋಪವಾಗದಂತೆ ನಡೆಸಲು ಉಡುಪಿ ಡಿಸಿ ಸೂಚನೆ

ಮಣಿಪಾಲ: ಜಿಲ್ಲೆಯಲ್ಲಿ ಜೂ. 21ರಂದು ನಡೆಯಲಿರುವ ರಾಷ್ಟ್ರೀಯ ಪ್ರವೇಶ ಹಾಗೂ ಅರ್ಹತಾ ಪರೀಕ್ಷೆ (ನೀಟ್)ಯಲ್ಲಿ ಲೋಪದೋಷ ಆಗದಂತೆ ಪಾರದರ್ಶಕವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪಾ ಟಿ. ಕೆ. ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ನೀಟ್ ಮರು ಪರೀಕ್ಷೆಯ ಪೂರ್ವಭಾವಿ ಸಂಬಂಧಿಸಿದ ಸಭೆಯಲ್ಲಿ ಅವರು ಮಾತನಾಡಿ, ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಜಿಲ್ಲೆಯ 6 ಕೇಂದ್ರಗಳಲ್ಲಿ ನೀಟ್ ನಡೆಸಲಿದೆ. 2,970 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದು, ಗೊಂದಲ ಉಂಟಾಗದಂತೆ ಪರೀಕ್ಷೆ ನಡೆಸಬೇಕು ಎಂದರು.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ದೊಳಗೆ ಮೊಬೈಲ್ ಫೋನ್, ಸ್ಮಾರ್ಟ್‌ ವಾಚ್‌ಗಳು, ಕ್ಯಾಲ್ಕುಲೇಟರ್, ಬ್ಲೂಟೂತ್ ಡಿವೈಸ್, ಇಯರ್‌ಫೋನ್ಸ್ ಸಹಿತ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ಮತ್ತು ವಾಲೆಟ್ಸ್, ಹ್ಯಾಂಡ್‌ಬ್ಯಾಗ್ ಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆಗಳು ಆರಂಭಕ್ಕೆ ಸಾಕಷ್ಟು ಮುಂಚಿತವಾಗಿ ವಿದ್ಯಾರ್ಥಿಗಳು ಕೇಂದ್ರದಲ್ಲಿ ಹಾಜರಿರಬೇಕು ಹಾಗೂ ತಮ್ಮ ಪರೀಕ್ಷಾ ಪ್ರವೇಶಪತ್ರದ ಜತೆ ಯಾವುದಾದರೊಂದು ಗುರುತಿನ ಚೀಟಿ (ಕಾಲೇಜಿನ ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್‌, ಆಧಾರ್‌ಕಾರ್ಡ್, ಪಾನ್‌ಕಾರ್ಡ್ ಮೊದಲಾದ ಐಡಿಯ ಮೂಲಪ್ರತಿ), 2 ಭಾವಚಿತ್ರಗಳೊಂದಿಗೆ ಪರೀಕ್ಷೆಗೆ ಹಾಜರಿರಬೇಕು ಎಂದರು.

ಪರೀಕ್ಷೆ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಕುಡಿಯುವ ನೀರು, ಶೌಚಾಲಯ ಸಹಿತ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಕೇಂದ್ರಗಳ ಸುತ್ತಮುತ್ತ ಸೂಕ್ತ ಭದ್ರತೆ ಒದಗಿಸಬೇಕು. ಪ್ರಶ್ನೆಪತ್ರಿಕೆ ತರಿಸಿಕೊಳ್ಳಲು, ಉತ್ತರ ಪತ್ರಿಕೆ ರವಾನೆಗೆ ವಾಹನ ಸಿದ್ಧವಾಗಿಟ್ಟುಕೊಳ್ಳಬೇಕು. ಕೇಂದ್ರಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಎಚ್ಚರ ವಹಿಸಬೇಕು. ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.

ಆರು ಕೇಂದ್ರಗಳಲ್ಲಿ ಪರೀಕ್ಷೆ

ನೀಟ್ ಸಂಬಂಧಿಸಿದ ಜಿಲ್ಲಾ ನೋಡಲ್ ಅಧಿಕಾರಿ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಎನ್. ಕರೀಂ ಖಾನ್ ಮಾತನಾಡಿ, ಮರು ಪರೀಕ್ಷೆ ಅಜ್ಜರಕಾಡು ಡಾ| ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು, ಎಂಜಿಎಂ ಪಿಯು ಕಾಲೇಜು, ಉಡುಪಿಯ ಸರಕಾರಿ ಪಿ.ಯು. ಬೋರ್ಡ್ ಹೈಸ್ಕೂಲ್, ಸರಕಾರಿ ಬಾಲಕಿಯರ ಪಪೂ ಕಾಲೇಜು, ಕೋಟ ವಿವೇಕ ಪಪೂ ಕಾಲೇಜು, ಬ್ರಹ್ಮಾವರ ಸರಕಾರಿ ಪಪೂ ಕಾಲೇಜುಗಳಲ್ಲಿ ನಡೆಯಲಿದೆ.

ಎಲ್ಲೆಡೆ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಬಾಲಕ, ಬಾಲಕಿಯರಿಗೆ ಪ್ರತ್ಯೇಕವಾಗಿ ಫ್ರಿಸ್ಕಿಂಗ್ ನಡೆಸಲಾಗುವುದು. ಬಯೋ ಮೆಟ್ರಿಕ್ ದೃಢೀಕರಣ ಬಳಿಕವೇ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪರೀಕ್ಷೆ ಮುಗಿದ ಬಳಿಕ ಒಎಂಆರ್ ಶೀಟ್‌ಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ಮಾರ್ಗಸೂಚಿಯನುಸಾರ ಕ್ರಮ ವಹಿಸಬೇಕು ಎಂದರು.

Edited By : Vijay Kumar
Kshetra Samachara

Kshetra Samachara

19/06/2026 12:11 pm

Cinque Terre

1.77 K

Cinque Terre

0

ಸಂಬಂಧಿತ ಸುದ್ದಿ