ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣಾ ನದಿಗೆ ನೀರು ಬಿಡುವ ಸಂಬಂಧ ಮಹಾ ಸಿಎಂ ಜೊತೆ ಡಿಕೆಶಿ ಸಭೆ: ಡಿಸಿ ಮಾಹಿತಿ

ಬೆಳಗಾವಿ: ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡುವ ಸಂಬಂಧ ಜೂನ್ 20ರಂದು ನಮ್ಮ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಜೊತೆಗೆ ಮುಂಬೈನಲ್ಲಿ ಸಭೆ ನಡೆಸಲಿದ್ದಾರೆ. ಈ ಬಾರಿ 2 ಟಿಎಂಸಿ ನೀರು ಬಿಡುಗಡೆ ಆಗುವ ವಿಶ್ವಾಸ ಇದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಿಂದೆ ಬೇಸಿಗೆ ಸಮಯದಲ್ಲಿ ಮಹಾರಾಷ್ಟ್ರದಿಂದ 2 ಟಿಎಂಸಿ ನೀರು ಬಿಡುತ್ತಿದ್ದರು. ಆದರೆ, ಕಳೆದ ಐದಾರು ವರ್ಷಗಳಿಂದ ಬಿಡುತ್ತಿಲ್ಲ. ಹೀಗಾಗಿ, ಮೊದಲಿನ ಹಾಗೆ ನೀರು ಬಿಡುಗಡೆ ಮಾಡುವಂತೆ ನಮ್ಮ ಮುಖ್ಯಮಂತ್ರಿಗಳು ಮಹಾ ಸಿಎಂ ಮುಂದೆ ಪ್ರಸ್ತಾಪಿಸಲಿದ್ದಾರೆ. 2 ಟಿಎಂಸಿ ನೀರು ಬರುವ ವಿಶ್ವಾಸ ಇದೆ. ಇದಕ್ಕೆ ಇನ್ನೂ ಹತ್ತು ದಿನ ಸಮಯ ಬೇಕಾಗುತ್ತದೆ. ಆ ನೀರನ್ನು ಕೇವಲ ಕುಡಿಯಲು ಮಾತ್ರ ಬಳಸಲಾಗುವುದು ಎಂದರು.

ಹಿಪ್ಪರಗಿ ಬ್ಯಾರೇಜ್ ಗೇಟ್ ಮುರಿದ ಪರಿಣಾಮ ಒಂದೂವರೆ ಟಿಎಂಸಿ ನೀರನ್ನು ನಾವು ಕಳೆದುಕೊಳ್ಳಬೇಕಾಯಿತು. ಅಲ್ಲಿ ಈಗ 0.08 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಮೊನ್ನೆಯ ಸಭೆಯಲ್ಲಿ ಈ ವಿಷಯದ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಪ್ರಸ್ತಾಪ ಮಾಡಿದ್ದೇನೆ. ಹೀಗಾಗಿ, ನಮ್ಮ ಸಿಎಂ ತಾವೇ ಖುದ್ದಾಗಿ ಮಹಾರಾಷ್ಟ್ರ ಸಿಎಂ ಭೇಟಿ ಆಗಿ, ನೀರು ಬಿಡುವಂತೆ ಅವರಿಗೆ ಮನವರಿಕೆ ಮಾಡಲಿದ್ದಾರೆ ಎಂದು ಹೇಳಿದರು.

ಇನ್ನು ಘಟಪ್ರಭಾ ನದಿಗೆ ಅಡ್ಡಲಾಗಿ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದಲ್ಲಿ ನಿರ್ಮಿಸಿರುವ ರಾಜಾ ಲಖಮಗೌಡ ಜಲಾಶಯದಲ್ಲಿ ಸದ್ಯಕ್ಕೆ 5.5 ಟಿಎಂಸಿ ನೀರಿದೆ. ಈಗ ಕೃಷಿ ಚಟುವಟಿಕೆಗೆ ಯಾವುದೇ ರೀತಿ ನೀರು ಪೂರೈಕೆ ಮಾಡುತ್ತಿಲ್ಲ. ಈ ನೀರನ್ನೂ ಕೇವಲ ಕುಡಿಯಲು ಮಾತ್ರ ಬಳಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಅದೇರೀತಿ ಮಲಪ್ರಭಾ ನದಿಯಲ್ಲಿ 8 ಟಿಎಂಸಿ ನೀರಿದೆ. ಅದರಲ್ಲಿ ನಮ್ಮ ನಿಯಂತ್ರಣದಲ್ಲಿ 5 ಟಿಎಂಸಿ ನೀರು ಬರುತ್ತದೆ. ಧಾರವಾಡ ಜಿಲ್ಲೆಗೆ ಜುಲೈ ತಿಂಗಳ ಅಂತ್ಯದವರೆಗೆ 0.36 ಟಿಎಂಸಿ ನೀರು ಬೇಕಾಗುತ್ತದೆ. ಸವದತ್ತಿ ಮತ್ತು ಬೈಲಹೊಂಗಲಕ್ಕೆ 0.03 ಟಿಎಂಸಿ ನೀರು ಕೊಡಬೇಕಾಗುತ್ತದೆ. ಹೀಗಾಗಿ, ಹಿಡಕಲ್ ಮತ್ತು ನವಿಲುತೀರ್ಥ ಜಲಾಶಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದರು.

ಬೆಳಗಾವಿ ನಗರದಲ್ಲಿ ತಕ್ಷಣ 'ತುರ್ತು ನಿಗಾ ಯೋಜನೆ' ಸಿದ್ಧಪಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದೇನೆ. ಖಾಸಗಿ ಬೋರ್‌ವೆಲ್, ಟ್ಯಾಂಕರ್ ಗುರುತಿಸಿ, ಅವುಗಳನ್ನು ವಶಕ್ಕೆ ಪಡೆದುಕೊಂಡು, ಬಾಡಿಗೆ ರೂಪದಲ್ಲಿ ಬಳಸಲಾಗುತ್ತದೆ. ಒಂದು ಟ್ಯಾಂಕರ್‌ಗೆ ಎಷ್ಟು ದರ ನಿಗದಿಪಡಿಸಬೇಕು ಎಂಬುದನ್ನು ತಿಳಿಸುವಂತೆ ಹೇಳಿದ್ದೇವೆ. ಅದನ್ನು ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದಲ್ಲಿ ಅಂತಿಮಗೊಳಿಸುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸದ್ಯಕ್ಕೆ ನಮ್ಮಲ್ಲಿ 36 ವಾರಕ್ಕೆ ಬೇಕಾಗುವಷ್ಟು ಮೇವಿನ ಲಭ್ಯತೆ ಇದೆ. ಮೂರನಾಲ್ಕು ವಾರದ ಬಳಿಕ ಪರಿಸ್ಥಿತಿ ಅವಲೋಕಿಸುತ್ತೇವೆ. ಮುಂಗಾರು ಮುಗಿಯುವ ತನಕ ಜಿಲ್ಲೆಯಲ್ಲಿ ಮೇವಿನ ಸಮಸ್ಯೆ ಉದ್ಭವಿಸುವುದಿಲ್ಲ. ಜಾನುವಾರುಗಳಿಗೆ ನೀರಿನ ವ್ಯವಸ್ಥೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು ಮಾಡಲಿವೆ. ಎಲ್ಲೆಲ್ಲಿ ಗೋಶಾಲೆಗಳಿವೆ ಅಲ್ಲೆಲ್ಲಾ ನೀರು ಸಂಗ್ರಹಿಸುವಂತೆ ಮಾಡಲಾಗುವುದು. ಇದೆಲ್ಲವನ್ನು ಜಿಲ್ಲಾ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಮಾನಿಟರ್ ಮಾಡಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Edited By : Vinayak Patil
PublicNext

PublicNext

19/06/2026 12:36 pm

Cinque Terre

7.34 K

Cinque Terre

0

ಸಂಬಂಧಿತ ಸುದ್ದಿ