ಬೆಳಗಾವಿ: ಮದುವೆಗೆ ವಿರೋಧ
ವ್ಯಕ್ತಪಡಿಸಿದ ಕಾರಣಕ್ಕೆ ಲಿವ್-ಇನ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯನ್ನು ಕಬ್ಬಿಣದ ರಾಡ್‌ನಿಂದ ಹೊಡೆದು ಕೊಂದು, ಶವವನ್ನು ಮಹಾರಾಷ್ಟ್ರದ ಘಾಟ್ ಪ್ರದೇಶದಲ್ಲಿ ಎಸೆದಿದ್ದ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಮೃತರನ್ನು ಬೆಳಗಾವಿಯ ಗಂಗವ್ವ ಹಂಚಿನಮನಿ(25) ಎಂದು ಗುರುತಿಸಲಾಗಿದ್ದು, ಹತ್ಯೆ ಮಾಡಿದ ಪ್ರಿಯಕರ ಬಸವರಾಜ್(33) ಸೇರಿದಂತೆ ಮೂವರನ್ನು ಟೋಲ್‌ಗೇಟ್ ಸಿಸಿ ಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಬಂಧಿಸಲಾಗಿದೆ.
ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ಆರೋಪಿ ಬಸವರಾಜ್, ಕಳೆದ ಹತ್ತು ವರ್ಷಗಳಿಂದ ಗಂಗವ್ವಳೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದನು. ಆದರೆ, ಇತ್ತೀಚೆಗೆ ಆಕೆಗೆ ತಿಳಿಸದೆಯೇ ಬೇರೊಬ್ಬ ಯುವತಿಯೊಂದಿಗೆ ಮದುವೆಯಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದನು. ಈ ವಿಷಯ ತಿಳಿದ ಗಂಗವ್ವ ಆತನನ್ನು ತೀವ್ರವಾಗಿ ಪ್ರಶ್ನಿಸಿ, ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಳು. ಇದೇ ಕಾರಣಕ್ಕೆ ಆಕೆಯನ್ನು ಬಸವರಾಜ್ ತನ್ನ ತಂದೆ ಯಲ್ಲಪ್ಪ ಹಾಗೂ ಮಾವ ಲಗಮಪ್ಪನ ಜೊತೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದನು.
ಮಹಾರಾಷ್ಟ್ರದ ವಿಶಾಲಗಢಕ್ಕೆ ಹೋಗೋಣ ಎಂದು ನಂಬಿಸಿ ಗಂಗವ್ವಳನ್ನು ಕಾರಿನಲ್ಲಿ ಕರೆದೊಯ್ದಿದ್ದಾರೆ. ಮಹಾರಾಷ್ಟ್ರದ ತಿಲಾರಿ ಘಾಟ್ ತಲುಪುತ್ತಿದ್ದಂತೆ ಆರೋಪಿಗಳು ಆಕೆಯ ಮೇಲೆ ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದು ಜೀವ ತೆಗೆದಿದ್ದಾರೆ. ನಂತರ ಗುರುತು ಸಿಗದಂತೆ ಮಾಡಲು ಅಲ್ಲಿನ ದಟ್ಟ ಕಾಡಿನ ಪ್ರಪಾತಕ್ಕೆ ಶವವನ್ನು ಎಸೆದು ತಮ್ಮೂರಿಗೆ ಮರಳಿ ಪರಾರಿಯಾಗಿದ್ದರು.
ಮೇ 29ರಂದು ಮಹಾರಾಷ್ಟ್ರದ ತಿಲಾರಿ ಘಾಟ್ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಬಿದ್ದ ಭಾರಿ ಪೆಟ್ಟಿನಿಂದ ಸಾವು ಸಂಭವಿಸಿದೆ ಎಂಬುದು ದೃಢಪಟ್ಟಿತ್ತು. ತನಿಖೆ ಕೈಗೆತ್ತಿಕೊಂಡ ಮಹಾರಾಷ್ಟ್ರದ ಚಂದಗಢ ಪೊಲೀಸರು, ಆ ರಸ್ತೆಯ ಟೋಲ್‌ಗೇಟ್ ಹಾಗೂ ಹೆದ್ದಾರಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಜಾಲಾಡಿದಾಗ ಅನುಮಾನಾಸ್ಪದ ಕಾರಿನ ನಂಬರ್ ಪತ್ತೆಯಾಗಿದೆ. ಆ ಕಾರಿನ ಮಾಲೀಕತ್ವದ ಹಿನ್ನೆಲೆಯಲ್ಲಿ ಬೆನ್ನಟ್ಟಿದಾಗ ಕೊಲೆಯ ಸಂಪೂರ್ಣ ಸತ್ಯಾಂಶ ಬೆಳಕಿಗೆ ಬಂದಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಖ್ಯ ಆರೋಪಿ ಶಿಕ್ಷಕ ಬಸವರಾಜ್ ಸೇರಿದಂತೆ ಮೂವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
PublicNext
19/06/2026 11:55 am