ನವದೆಹಲಿ: ತನಗಾಗಿ ಸುದೀರ್ಘ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಗೃಹ ಕೆಲಸಗಾರ್ತಿಯನ್ನು ಅತ್ಯಂತ ಕ್ರೂರವಾಗಿ ಕೊಂದ ಆರೋಪದ ಮೇಲೆ ದೆಹಲಿಯ ಪ್ರಖ್ಯಾತ ಚರ್ಮರೋಗ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಮೌಂಟ್ ಕೈಲಾಶ್ ನಿವಾಸಿಯಾದ ಡಾ. ಮನೀಶ್ ಗುಪ್ತಾ ಬಂಧಿತ ಆರೋಪಿ. ಈತ ತನ್ನ ಮನೆಯಲ್ಲೇ ಕೆಲಸ ಮಾಡುತ್ತಿದ್ದ 45 ವರ್ಷದ ಮೀನಾ ಎಂಬಾಕೆಯನ್ನು ಕ್ರಿಕೆಟ್ ಬ್ಯಾಟ್‌ನಿಂದ ಮನಬಂದಂತೆ ಥಳಿಸಿ, ಬಳಿಕ ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮೀನಾ ಕಳೆದ 15 ವರ್ಷಗಳಿಂದ ಇದೇ ವೈದ್ಯನ ಕುಟುಂಬದಲ್ಲಿ ನಂಬಿಕಸ್ಥಳಾಗಿ ಕೆಲಸ ಮಾಡುತ್ತಿದ್ದರು.
ಪೊಲೀಸ್ ವಿಚಾರಣೆ ವೇಳೆ ಆರೋಪಿ ಡಾ. ಮನೀಶ್ ಗುಪ್ತಾ ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಕೆಲಸಗಾರ್ತಿ ಮೀನಾ ತನ್ನ ಮೇಲೆ ಮಾಟಮಂತ್ರ ಮಾಡುತ್ತಿದ್ದಳು ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಆಕೆಯನ್ನು ಕೆಲಸದಿಂದ ತೆಗೆದುಹಾಕುವ ವಿಚಾರವಾಗಿ ತನ್ನ ಹೆಂಡತಿಯೊಂದಿಗೆ ಜಗಳ ನಡೆದಿತ್ತು ಎಂದು ಹೇಳುತ್ತಿದ್ದಾನೆ. ಮೂಲಗಳ ಪ್ರಕಾರ, ಆರೋಪಿ ವೈದ್ಯ ಕಳೆದ ಕೆಲವು ಸಮಯದಿಂದ ಖಿನ್ನತೆ (Depression) ಮತ್ತು ಒಸಿಡಿ (OCD) ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ಎನ್ನಲಾಗಿದೆ.
ಸದ್ಯ ಕೊಲೆಗೆ ಬಳಸಲಾದ ಕ್ರಿಕೆಟ್ ಬ್ಯಾಟ್ ಹಾಗೂ ಚಾಕುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಮಾನಸಿಕ ಆರೋಗ್ಯದ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
PublicNext
19/06/2026 12:59 pm
LOADING...