ಕೊರಿಯಾ (ಛತ್ತೀಸ್‌ಗಢ): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನೊಬ್ಬ ತನ್ನದೇ ಹೆಂಡತಿಯ ಮೇಲೆ ಮೃಗದಂತೆರಗಿ, ಆಕೆಗೆ ಸಾರ್ವಜನಿಕವಾಗಿ ತೀವ್ರ ಅಮಾನವೀಯ ಕಿರುಕುಳ ನೀಡಿದ ಅತ್ಯಂತ ಆಘಾತಕಾರಿ ಘಟನೆಯೊಂದು ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಿಂದ ಬೆಳಕಿಗೆ ಬಂದಿದೆ.
ಆರೋಪಿ ಪತಿ ತನ್ನ ಪತ್ನಿಯ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ಹಾಕಿ, ಆಕೆಯ ಬಟ್ಟೆಗಳನ್ನು ಹರಿದು ಹಾಕಿ, ಅಮಾನವೀಯವಾಗಿ ಥಳಿಸಿದ್ದಾನೆ. ಅಷ್ಟಕ್ಕೇ ನಿಲ್ಲದ ಈತನ ವಿಕೃತಿ, ಸಾರ್ವಜನಿಕರ ಎದುರೇ ಕತ್ತರಿಯಿಂದ ಆಕೆಯ ಕೂದಲನ್ನು ಕತ್ತರಿಸಿ, ಸಂಪೂರ್ಣವಾಗಿ ತಲೆ ಬೋಳಿಸಿದ್ದಾನೆ. ನಂತರ ಆಕೆಯ ಮುಖಕ್ಕೆ ಕಪ್ಪು ಬಣ್ಣ ಬಳಿದು ವಿಕೃತಿ ಮೆರೆದಿದ್ದಾನೆ. ಈ ಇಡೀ ದೃಶ್ಯದ ದಿಗಿಲು ಹುಟ್ಟಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸಂತ್ರಸ್ತೆ ಸಾರ್ವಜನಿಕವಾಗಿ ಅಸಹಾಯಕಳಾಗಿ ಕುಳಿತಿರುವಾಗ, ಆಕೆಗೆ ಬಲವಂತವಾಗಿ ಮೂತ್ರ ಕುಡಿಸಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಆರೋಪಿ ಪತಿಯು ಪತ್ನಿಯ ನಡತೆಯ ಬಗ್ಗೆ ಆರೋಪ ಮಾಡಿದ್ದಾನೆ. "ಈಕೆ ಮಕ್ಕಳನ್ನು ಬಿಟ್ಟು ಬೇರೆಯವರೊಂದಿಗೆ ಓಡಿಹೋಗಿದ್ದಳು. ಮೊದಲು ಮೈದುನನ ಜೊತೆ, ನಂತರ ಸೋದರಳಿಯನ ಜೊತೆ ಓಡಿಹೋಗಿ ನಮಗೆ ಮೋಸ ಮಾಡಿದ್ದಾಳೆ" ಎಂದು ಗಂಡ ಕಿರುಚಾಡುತ್ತಿರುವುದು ಕೇಳಿಬಂದಿದೆ. 2006ರಲ್ಲಿ ಇವರಿಬ್ಬರ ಪ್ರೇಮ ವಿವಾಹವಾಗಿದ್ದು, ಕಳೆದ ಕೆಲವು ಸಮಯದಿಂದ ಹೆಂಡತಿ ಪತಿಯಿಂದ ದೂರವಾಗಿ 'ಪಾಂಡೋಪಹಾರ್' ಎಂಬಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸದ್ಯ ಸಂತ್ರಸ್ತ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ಪೊಲೀಸರು ಆರೋಪಿ ಪತಿಯ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ವಿಕೃತ ಪತಿಯ ಪತ್ತೆಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
PublicNext
19/06/2026 03:50 pm