ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಯುವಕನಿಗೆ ನೀಟ್ ಪರೀಕ್ಷೆ ಬರೆಯಲು ಜಾಮೀನು ಮಂಜೂರು

ಮುಂಬೈ: ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ 18 ವರ್ಷದ ಯುವಕನಿಗೆ ಜೂನ್ 21 ರಂದು ನಡೆಯುವ ನೀಟ್ ಮರು ಪರೀಕ್ಷೆಗೆ ಹಾಜರಾಗಲು ಮುಂಬೈನ ವಿಶೇಷ ಪೋಕ್ಸೋ ನ್ಯಾಯಾಲಯ ನಾಲ್ಕು ದಿನಗಳ ತಾತ್ಕಾಲಿಕ ಜಾಮೀನು ಮಂಜೂರು ಮಾಡಿದೆ.

ಸಂತ್ರಸ್ತೆ ಜಾಮೀನು ಅರ್ಜಿಗೆ ಯಾವುದೇ ಆಕ್ಷೇಪಣೆ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ, ಸಂತ್ರಸ್ತೆಯ ಕುಟುಂಬಕ್ಕೆ ಮಾನಹಾನಿ ಅಥವಾ ಬೆದರಿಕೆ ಹಾಕುವುದಿಲ್ಲ ಎಂಬ ಭರವಸೆಯೊಂದಿಗೆ ವಿಶೇಷ ನ್ಯಾಯಾಧೀಶ ಎಸ್. ಆರ್. ಶರ್ಮಾ ಅವರ ಪೀಠ ಈ ಆದೇಶ ಹೊರಡಿಸಿದೆ.

ಆದೇಶದ ಪ್ರಕಾರ, ಆರೋಪಿಯು 50,000 ರೂಪಾಯಿಗಳ ಬಾಂಡ್ ಮತ್ತು ಅದೇ ಮೊತ್ತದ ಶೂರಿಟಿ ನೀಡಬೇಕಾಗಿದೆ. ಅಲ್ಲದೆ, ನೀಟ್ ಮರು ಪರೀಕ್ಷೆ ನಡೆದ ಒಂದು ದಿನದ ನಂತರ, ಅಂದರೆ ಜೂನ್ 22ರಂದು ಮಧ್ಯಾಹ್ನ 2 ಗಂಟೆಯೊಳಗೆ ಅಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಸೂಚಿಸಿದೆ.

ಆರೋಪಿ ಪರ ವಾದ ಮಂಡಿಸಿದ ವಕೀಲ ಕಪಿಲ್ ವಿಶ್ವಾಸ್ ಜೋಡ್ಜ್, ಅಪರಾಧ ನ್ಯಾಯ ವ್ಯವಸ್ಥೆಯು ಶಿಕ್ಷೆಗೊಳಗಾದವರು ಮತ್ತು ಜೈಲಿನಲ್ಲಿರುವ ವ್ಯಕ್ತಿಗಳ ಪುನರ್ವಸತಿಗೆ ಒತ್ತು ನೀಡುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಆದ್ದರಿಂದ, ಅರ್ಜಿದಾರನಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಪೊಲೀಸ್ ಬೆಂಗಾವಲಿನಲ್ಲಿ ಪರೀಕ್ಷೆ ಬರೆಯುವುದರಿಂದ ಆತನ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದೆ ಮತ್ತು ಪರೀಕ್ಷೆಗೆ ತಯಾರಿ ನಡೆಸಲು ಸಮಯ ಬೇಕಾಗುತ್ತದೆ ಎಂದು ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪಬ್ಲಿಕ್‌ ಪ್ರಾಸಿಕ್ಯೂಟರ್ ಚೈತ್ರಾಲಿ ಪನ್ಶಿಕರ್‌, ಯುವಕನ ವಿರುದ್ಧದ ಆರೋಪ ಗಂಭೀರ ಸ್ವರೂಪದ್ದಾಗಿದೆ ಎಂದು ವಾದಿಸಿದರು. ನ್ಯಾಯಾಲಯವು ಜಾಮೀನು ನೀಡಬಾರದು ಅಥವಾ ಕನಿಷ್ಠ ಒಂದು ದಿನ ಮಾತ್ರ ಪೊಲೀಸ್ ಬೆಂಗಾವಲಿನಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು, ಕೆಲವು ಕಟ್ಟುನಿಟ್ಟಾದ ನಿರ್ದೇಶನಗಳೊಂದಿಗೆ ಜಾಮೀನು ಮಂಜೂರು ಮಾಡಿತು. ಆರೋಪಿಯು ಸಂತ್ರಸ್ತೆಯನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸಬಾರದು, ಸಾಕ್ಷ್ಯಗಳನ್ನು ಹಾಳು ಮಾಡಬಾರದು ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಯಾರನ್ನೂ ಪ್ರಚೋದಿಸುವುದಾಗಲಿ ಅಥವಾ ಬೆದರಿಕೆ ಹಾಕುವುದಾಗಲಿ ಮಾಡಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಅಲ್ಲದೆ, ಪರೀಕ್ಷೆಗೆ ಹಾಜರಾದ ಬಗ್ಗೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿ, ಜಾಮೀನು ಮಂಜೂರು ಮಾಡಿದೆ.

Edited By :
PublicNext

PublicNext

19/06/2026 02:03 pm

Cinque Terre

17.71 K

Cinque Terre

0

ಸಂಬಂಧಿತ ಸುದ್ದಿ