ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಭದ್ರಾ ಡ್ಯಾಮ್ ಸಮೀಪ ಸ್ಫೋಟಕ ಬಳಸಿ ಕಾಮಗಾರಿ, ವೈಜ್ಞಾನಿಕ ಪರಿಶೀಲನೆಗೆ ರೇಣುಕಾಚಾರ್ಯ ಆಗ್ರಹ

ಶಿವಮೊಗ್ಗ : ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಜೀವನಾಡಿಯಾಗಿರುವ ಭದ್ರಾ ಜಲಾಶಯದ ಸಮೀಪ ಜಿಲೆಟಿನ್ ಬಳಸಿ ಬಂಡೆ ಸ್ಫೋಟಿಸಿ ಜಾಕ್‌ವೆಲ್ ಕಾಮಗಾರಿ ಕೈಗೊಳ್ಳುತ್ತಿರುವುದು ರೈತರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ. ಭದ್ರಾಜಲಾಶಯದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭದ್ರಾ ಜಲಾಶಯವು ಲಕ್ಷಾಂತರ ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಜಿಲ್ಲೆಯ ಜನರ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದ್ದು, ಇಂತಹ ಮಹತ್ವದ ಜಲಾಶಯದಿಂದ ಕೇವಲ 800 ಮೀಟರ್ ಅಂತರದಲ್ಲಿ ಸ್ಫೋಟಕಗಳನ್ನು ಬಳಸಿ ಕಾಮಗಾರಿ ನಡೆಸುತ್ತಿರುವುದು ಸುರಕ್ಷತಾ ದೃಷ್ಟಿಯಿಂದ ಗಂಭೀರ ವಿಷಯವಾಗಿದೆ ಎಂದು ಹೇಳಿದರು.

ನಮ್ಮ ಹೋರಾಟ ಯಾವುದೇ ಜಿಲ್ಲೆಯ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆಗೆ ವಿರುದ್ಧವಾಗಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಶುದ್ಧ ಕುಡಿಯುವ ನೀರು ದೊರಕಬೇಕು ಎಂಬುದು ನಮ್ಮ ಸ್ಪಷ್ಟ ನಿಲುವು. ಆದರೆ, ಜಲಾಶಯದ ಸುರಕ್ಷತೆಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಕಾಮಗಾರಿ ನಡೆಸುವುದನ್ನು ಒಪ್ಪಲಾಗದು ಎಂದು ತಿಳಿಸಿದರು.

ಭದ್ರಾ ಡ್ಯಾಮ್ ಕೇವಲ ಜಲಾಶಯವಲ್ಲ, ಅದು ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ, ಹರಪನಹಳ್ಳಿ ಸೇರಿದಂತೆ ಅನೇಕ ಭಾಗಗಳ ರೈತರ ಬದುಕಿನ ಆಶಾಕಿರಣವಾಗಿದೆ. ಡ್ಯಾಮ್‌ಗೆ ಯಾವುದೇ ರೀತಿಯ ಹಾನಿ ಸಂಭವಿಸಿದರೆ ಸಾವಿರಾರು ರೈತ ಕುಟುಂಬಗಳ ಬದುಕಿನ ಮೇಲೆ ಪರಿಣಾಮ ಬೀಳಲಿದೆ ಎಂದು ಎಚ್ಚರಿಸಿದರು. ಆದ್ದರಿಂದ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತಜ್ಞರಿಂದ ವೈಜ್ಞಾನಿಕ ಪರಿಶೀಲನೆ ನಡೆಸಿ, ಡ್ಯಾಮ್ ಸುರಕ್ಷತೆಗೆ ಯಾವುದೇ ರೀತಿಯ ಅಪಾಯ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Edited By :
PublicNext

PublicNext

19/06/2026 01:34 pm

Cinque Terre

8.55 K

Cinque Terre

0

ಸಂಬಂಧಿತ ಸುದ್ದಿ