ಶಿವಮೊಗ್ಗ: ಆತ ಏನೂ ಅರಿಯದೇ ತಾನಾಯ್ತು, ತನ್ನ ಕೆಲಸವಾಯ್ತು ಅಂತಾ ಅಂದುಕೊಂಡು ರಾತ್ರಿ ಮನೆ ಮುಂದೆ ಟ್ರ್ಯಾಕ್ಟರ್ ನಿಲ್ಸಿ, ಊಟ ಮಾಡಿ ಮಲಗಿದ್ದ ಅಷ್ಟೇ. ಆದ್ರೆ, ಕೊಲೆಗಡುಕರು, ಯಾವಾಗ ಮನೆಯೊಳಗೆ ನುಗ್ಗಿದ್ರೋ, ಯಾವಾಗ ಕೊಲೆ ಮಾಡಿದ್ರೋ ಅನ್ನೋದು ಯಾರಿಗೂ ಗೊತ್ತಿಲ್ಲ. ಬೆಳಿಗ್ಗೆ ಈತನ ಜೊತೆ ಕೆಲಸ ಮಾಡೋರು ಮನೆ ಬಳಿ ಬಂದಾಗ್ಲೇ ಗೊತ್ತಾಗಿದ್ದು... ಈ ಮನೆಯಲ್ಲಿ ಭೀಕರ ಕೊಲೆಯೊಂದು ನಡೆದು ಹೋಗಿದೆ ಅಂತಾ!
ಹೀಗೆ ರಕ್ತಸಿಕ್ತವಾಗಿ, ರಕ್ತದ ಮಡುವಿನಲ್ಲಿ ಹತನಾಗಿ ಮಲಗಿರುವ ಯುವಕನ ಹೆಸರು ಪ್ರವೀಣ್. 29 ವರ್ಷದ ಈ ಯುವಕನನ್ನು ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿದೆ. ಅಂದಹಾಗೆ, ಶಿವಮೊಗ್ಗ ತಾಲೂಕಿನ ಕುಂಸಿಯ ಆಯನೂರು ಗ್ರಾಮದ ಬಳಿ ಸುತ್ತುಕೋಟೆ ಎಂಬ ಗ್ರಾಮದಲ್ಲಿ ಈ ಭೀಕರ ಕೊಲೆ ನಡೆದು ಹೋಗಿದೆ. ಕೊಲೆಗೀಡಾದ ಪ್ರವೀಣ್ ಎಂದಿನಂತೆಯೇ, ತಮ್ಮ ಇನ್ನೊಂದು ಮನೆಯಲ್ಲಿ ತಂದೆ, ತಾಯಿ ಬಳಿ ಮಾತನಾಡಿ, ಬಳಿಕ ಊಟ ಮಾಡಿದ್ದ. ಪ್ರವೀಣ್ ಟ್ರ್ಯಾಕ್ಟರ್ ಬಾಡಿಗೆ ಕೆಲಸ ಮಾಡುತ್ತಿದ್ದು, ರಾತ್ರಿ ಊಟ ಮಾಡಿದ ಬಳಿಕ ಟ್ರ್ಯಾಕ್ಟರ್ ನ್ನು ಸರಿಯಾಗಿ ಮನೆ ಬಳಿ ನಿಲ್ಲಿಸಿ, ತಮ್ಮ ಹಳೆಯ ಮನೆಯಲ್ಲಿ ಬಂದು ಮಲಗಿದ್ದ. ಆದ್ರೆ, ಇಂದು ಎಂದಿನಂತೆ ಬೆಳಿಗ್ಗೆ ಕೆಲಸಕ್ಕೆ ತೆರಳಿರಲಿಲ್ಲ. ಆಗ ಈತನೊಂದಿಗೆ ಕೆಲಸಕ್ಕೆ ತೆರಳಬೇಕಿದ್ದ ಯುವಕರು, ಮನೆಗೆ ಆಗಮಿಸಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಬೈಟ್ : ಸುಧಾ, ಕೊಲೆಯಾದ ಪ್ರವೀಣ್ ಸಹೋದರಿ
ಇನ್ನು ತಮ್ಮ ಹಳೆಯ ಮನೆಯಲ್ಲಿ ಒಬ್ಬನೇ ಮಲಗುತ್ತಿದ್ದ ಪ್ರವೀಣನ ತಲೆ ಹಾಗೂ ಎದೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಅಷ್ಟಕ್ಕೂ ಈ ಕೊಲೆ ನಡೆದಿರುವ ಬಗ್ಗೆ ಎರಡು ಅನುಮಾನವಿದೆ. ಒಂದು ಬೈಕ್ ವಿಚಾರವಾಗಿ, ಹಣ ನೀಡದೇ ವಂಚಿಸಿರುವ ವ್ಯವಹಾರಿಕ ವೈಷಮ್ಯ ಹಾಗೂ ಈ ಹಿಂದೆ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸಿ ಕರೆದೊಯ್ದಿದ್ದ ವಿಚಾರವಾಗಿ ಕೆಲವರ ಜೊತೆ ವೈಷಮ್ಯ ಇತ್ತು ಎನ್ನಲಾಗಿದೆ. ಹಳೆಯ ವೈಷಮ್ಯದ ಹಿನ್ನೆಲೆಯಲ್ಲೇ ಕೊಲೆಯಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಒಟ್ಟಾರೆ, ಎಲ್ಲವೂ ಬಿಟ್ಟು ತಮ್ಮ ಪಾಡಿಗೆ ತಾವು ಇರೋಣ ಎಂದಾಗಲೂ ಈ ದ್ವೇಷ ಎಂಬುದು ಮತ್ತೆ ಕಿಚ್ಚು ಹಚ್ಚುತ್ತೆ ಅನ್ನೋದಕ್ಕೇ ಈ ಹತ್ಯೆ ತಾಜಾ ಉದಾಹರಣೆಯಾಗಿದೆ. ಕುಂಸಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಕೊಲೆಗೆ ನಿಖರ ಕಾರಣ ತನಿಖೆ ಬಳಿಕವಷ್ಟೇ, ಹೊರಬೀಳಲಿದೆ.
PublicNext
20/06/2026 08:07 pm