ಮಂಗಳೂರು: ಅಸ್ಸಾಂ, ಬಿಹಾರ ಮೂಲದ ಕಾರ್ಮಿಕರಿಗೆ ಅವರ ಹಿನ್ನೆಲೆ ತಿಳಿದುಕೊಳ್ಳದೆ, ಹಿರಿಯ ಅಧಿಕಾರಿಗಳ ಅನುಮತಿ ಇಲ್ಲದೆ 30ಕ್ಕೂ ಅಧಿಕ ಮಂದಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿರುವ ಆರೋಪದಲ್ಲಿ ಬಜ್ಪೆ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅಮಾನತು ಮಾಡಿದ್ದಾರೆ.
ಮಂಗಳೂರಿನ ಬಜಪೆ ಠಾಣೆಯ ಮಹಿಳಾ ಸಿಬ್ಬಂದಿ ಆಶಾ ಮತ್ತು ಹೆಡ್ ಕಾನ್‌ಸ್ಟೇಬಲ್ ಮಂಜುನಾಥ್ ಅಮಾನತು ಆದವರು. ಇವರು ಕಳೆದೊಂದು ವರ್ಷದಲ್ಲಿ 31ಮಂದಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದ್ದಾರೆಂಬ ಆರೋಪ ಕೇಳಿಬಂದಿದೆ. ಉನ್ನತ ಮಟ್ಟದ ತನಿಖಾ ಏಜನ್ಸಿಯಿಂದ ಈ ರೀತಿಯ ದುರುಪಯೋಗ ಆಗಿರುವ ಬಗ್ಗೆ ಮಾಹಿತಿ ಪಡೆದ ಮಂಗಳೂರಿನ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಇಬ್ಬರು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿದ್ದಾರೆ.
ಕ್ರಿಮಿನಲ್ ಹಿನ್ನೆಲೆ, ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಸ್ಸಾಂ ಮೂಲದ ಕೆಲವು ಕಾರ್ಮಿಕ ಯುವಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಿದ್ದಾರೆಂದು ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ಪೊಲೀಸ್ ಕಮಿಷನರ್ ತನಿಖೆಯ ಹೊಣೆಯನ್ನು ಮಂಗಳೂರು ಉತ್ತರ ಎಸಿಪಿ ಶ್ರೀಕಾಂತ್ ಅವರಿಗೆ ವಹಿಸಿದ್ದಾರೆ. ತನಿಖೆಯ ಬಳಿಕ ಖಚಿತ ಮಾಹಿತಿಯನ್ನು ನೀಡುವುದಾಗಿ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ. ಎಂಆರ್ ಪಿಎಲ್ ಸಂಸ್ಥೆಯಲ್ಲಿ ಗುತ್ತಿಗೆ ಕಾರ್ಮಿಕರಾಗಿ ಬಂದು ತಾತ್ಕಾಲಿಕ ವಿಳಾಸ ಹೊಂದಿದ್ದವರು, ಪಾಸ್ ಪೋರ್ಟ್ ಮಾಡಿಸುವ ಉದ್ದೇಶದಿಂದ ಮಧ್ಯವರ್ತಿಗಳನ್ನು ಬಳಸಿಕೊಂಡು ಬಜಪೆ ಠಾಣೆಯಿಂದ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದಿದ್ದರು ಎನ್ನಲಾಗಿದೆ. ಆದರೆ ಈ ರೀತಿ ಸರ್ಟಿಫಿಕೇಟ್ ಪಡೆದಿರುವ 31 ಮಂದಿಯಲ್ಲಿ ಕ್ರಿಮಿನಲ್ ಹಾಗು ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರಿದ್ದಾರೆಂಬ ಮಾಹಿತಿಗಳಿದ್ದು ಕೇಂದ್ರ ತನಿಖಾ ಏಜನ್ಸಿಯೊಂದು ಇಲಾಖೆಯ ಲೋಪದ ಬಗ್ಗೆ ಮಂಗಳೂರು ಪೊಲೀಸರನ್ನು ಪ್ರಶ್ನೆ ಮಾಡಿತ್ತು.
ಇಲಾಖಾ ತನಿಖೆ ಸಂದರ್ಭದಲ್ಲಿ ಬಜ್ಪೆ ಠಾಣಾಧಿಕಾರಿಗೆ ತಿಳಿಸದೆ, ಅವರ ಪಾಸ್ವರ್ಡ್ ದುರುಪಯೋಗ ಪಡಿಸಿ ಸಿಬ್ಬಂದಿಗಳೇ ಕ್ಲಿಯರೆನ್ಸ್ ನೀಡಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇದಕ್ಕಾಗಿ ಇಬ್ಬರು ಪೊಲೀಸರು ಮಧ್ಯವರ್ತಿ ಭರತ್ ಎಕ್ಕಾರ್ ಹಾಗು ಮಮತಾ ಎಂಬವರಿಂದ ಹಣ ಪಡೆದಿದ್ದಾರೆಂಬ ಮಾಹಿತಿಯಿದೆ. ಪ್ರಕರಣಕ್ಕೆ ಸಂಬಂಧಿಸಿ ಭರತ್ ಹಾಗು ಮಮತಾ ಅವರನ್ನು ಬಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಾಗಿದೆ.
PublicNext
19/06/2026 02:37 pm